Monday, May 29, 2017

ಊಟ ಮಾಡದ ಹುಡುಗಿ!

ನಾನು ಕೆಲಸಕ್ಕೆ ಸೇರಿದ ಹೊಸತು, ಅಲ್ಲಿ ಇರೋರ ಪರಿಚಯ ಎಲ್ಲ ಹೇಳಿ ಆದ ಮೇಲೆ ಆಗ ನನ್ನ ಟೀಮ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ರು "ನಿಮ್ಮ ಕಡೆ ಯಾರೋ ಊಟ ಮಾಡದ ಹುಡುಗಿ ಇದ್ದಾಳಂತೆ, ಹೌದಾ" ಅಂತ ಕೇಳಿದ್ರು.

ಅದು ನಾನೇ !

ನಾನು ಬಾಲವಾಡಿ ಹೋಗ್ತಾ ಇದ್ದಾಗ ಒಂದು ಸರ್ತಿ ಜ್ವರ ಬಂದಿತ್ತು, ತಿಂದಿದ್ದೆಲ್ಲಾ ವಾಂತಿ ಆಗ.  ಜ್ವರ ಬಿಟ್ ಮೇಲೆ ಏನು ತಿನ್ನಕ್ಕೂ ಭಯ,  ಎಲ್ಲಿ ಮತ್ತೆ ವಾಂತಿ ಆಗ್ಬಿಡತ್ತೋ ಅಂತ.  ಅಷ್ಟೇ, ಇದೇ ಕಾರಣಕ್ಕೆ ಅನ್ನ ಊಟ ಮಾಡೋದೇ ಬಿಟ್ಬಿಟ್ಟೆ.

ಹೊಟ್ಟೆ ತುಂಬಾ ಹಾಲು ಕುಡಿಯೋದು ಅಭ್ಯಾಸ ಆಯ್ತು. ದೋಸೆ, ಚಪಾತಿ ತಿಂತಾ ಇದ್ದೆ ಅವಾಗ, ಆದ್ರೆ ಅದೂ ಜಾಸ್ತಿ ದಿನ ನಡೀಲಿಲ್ಲ. 3-4 ಕ್ಲಾಸು ಹೋಗೋವಾಗ ಬೇಜಾರು ಬಂತು, ಅದೂ ಬಿಟ್ಟೆ.  ದೋಸೆ ತಿನ್ಬೇಕು ಅಂದ್ರೆ ಅದು ತುಂಬಾ ತೆಳ್ಳಗೆ ಮಾಡಿ, ಚೆನ್ನಾಗಿ ಆರಿಸಿ ಕೊಡ್ಬೇಕು. ಅದ್ರಲ್ಲೂ ದಪ್ಪ ಇರೋ ತುಂಡು ಹಸು-ಕರುಗಳಿಗೆ ಸೇರ್ತಿತ್ತು (ಅಮ್ಮಂಗೆ ಗೊತ್ತಾಗ್ದೆ ಇರೋ ಹಾಗೆ).

ಇದೆಲ್ಲ ಶುರು ಆಗೋ ಮುಂಚೆ ನಾನು ತುಂಬಾ ಚೆನ್ನಾಗಿ ಊಟ ಮಾಡ್ತಿದ್ದೆ ಅಂತೆ, ಅದಕ್ಕೆ ಯಾರದ್ದೋ ದೃಷ್ಟಿ ಆಗಿದೆ ಅಂತ ದೃಷ್ಟಿ ತೆಗೆದ್ರು. ಡಾಕ್ಟರ್ ಹತ್ರ ಕರ್ಕೊಂಡು ಹೋದ್ರು, ಅವರು ಹುಡುಗಿ ಉದ್ದ, ತೂಕ ಎಲ್ಲಾ ಸರಿ ಇದೆ, ಯಾಕೆ ಸುಮ್ನೆ ಯೋಚನೆ ಮಾಡ್ತೀರಾ ಅಂತ ಹೇಳಿ ಕಳಿಸಿದ್ರು!

ಇನ್ನೊಬ್ರು ಅವಳಿಗೆ ಒಂದು ದಿನ ಹಾಲು ಕೊಡ್ಬೇಡಿ, ಅವಾಗ ಹಸಿವಾಗಿ ಊಟ ಮಾಡೇ ಮಾಡ್ತಾಳೆ ಅಂತ ಐಡಿಯಾ ಕೊಟ್ರು. ಹಾಲಿನ ಪಾತ್ರೆ ಕೆಳಗಡೆ ಇದ್ರೆ ನಾನೇ ಲೋಟಕ್ಕೆ ಹಾಕಿಕೊಂಡು ಕುಡೀತಿದ್ದೆ ಅಂತ, ಅದು ನನಗೆ ಎಟಕದೆ ಇರೋ ಅಷ್ಟು ಮೇಲೆ ಇಟ್ಟಿದ್ರು. ನಾನೋ ಹಠಮಾರಿ, ಹಾಲು ಬಿಟ್ಟು ಬೇರೇನೂ ತಿನ್ನಲ್ಲ ಅಂತ ಸುಮ್ನೆ ಕೂತುಬಿಟ್ಟಿದ್ದೆ ಅವತ್ತು. ಅಮ್ಮಂಗೆ ಪಾಪ ನಾನು ಉಪವಾಸ ಇರೋದು ನೋಡಕ್ಕಾಗ್ಲಿಲ್ಲ. ಮತ್ತೆ ಹಾಲಿನ ಪಾತ್ರೆ ಕೆಳಗೆ ಬಂತು :-)

ಅವಾಗ ದಿನದ ಊಟ ಅಂದ್ರೆ, ಬೆಳಗ್ಗೆ ಒಂದು ದೊಡ್ಡ ಲೋಟ ಹಾಲು, ಶಾಲೆಗೆ ಹೋಗೋ ಮುಂಚೆ ಒಂದು ದೊಡ್ಡ ಲೋಟ ಕಾಫಿ(ಹಾಲು ಕಾಫಿ ಅನ್ನೋ ಹಾಗಿತ್ತು ಅದು). ಮಧ್ಯಾಹ್ನ ಮತ್ತೆ ಮನೆಗೆ ಬಂದು ಇನ್ನೊಂದು ದೊಡ್ಡ ಲೋಟ ಹಾಲು. ಸಾಯಂಕಾಲ ಮತ್ತೆ ಕಾಫಿ, ಜೊತೆಗೆ ಸ್ವಲ್ಪ ಕರುಮ್ ಕುರುಮ್ ತಿಂಡಿ. ದಿನಾ ಅಮ್ಮ ಪೂಜೆ ಮಾಡಿ ದೇವರಿಗೆ ನೈವೇದ್ಯ ಮಾಡಿದ್ದ ಹಾಲು ನಂಗೇ ಕೊಡ್ತಾ ಇದ್ರೂ ರಾತ್ರಿ.

ನಂಗೆ ಮಿಡಿ ಉಪ್ಪಿನಕಾಯಿ, ಮಜ್ಜಿಗೆ ತುಂಬಾ ಇಷ್ಟ ಇತ್ತು. ಸೌತೆಕಾಯಿ ಸಾಂಬಾರ್ ಮಾಡಿದ್ರೆ ಹೋಳು ತಿನ್ನೋಕ್ಕೆ ಇಷ್ಟ ಇತ್ತು. ಅದರ ಮಧ್ಯ ಅನ್ನದ ಅಗುಳು ಇತ್ತು ತಿನ್ಸೋ ಐಡಿಯಾ ಮಾಡಿದ್ರು ಅಮ್ಮ. ನಾನು ಅದ್ರಲ್ಲಿ ಅನ್ನದ ಅಗುಳನ್ನು ಎತ್ತಿಟ್ಟು, ಬರೀ ಉಪ್ಪಿನಕಾಯಿ/ಹೋಳುತಿಂದಿದ್ರಿಂದ ಅದೂ ವ್ಯ ರ್ಥ ಪ್ರಯತ್ನ ಆಗೋಯ್ತು.
 
9 ನೇ ಕ್ಲಾಸ್ ತನಕ ಇದೇ ಕತೆ,  ಆಮೇಲೆ  10ನೇ ಕ್ಲಾಸ್ ಅಲ್ಲಿ ಎಲ್ಲರೂ ಡಬ್ಬಿ ತರ್ಬೇಕು ಅನ್ನೋ ನಿಯಮ ಬಂತು. ಅವಾಗ ದಿನಾ ಸಿಹಿ ಅವಲಕ್ಕಿ ತೆಗೊಂಡ್ ಹೋಗಕ್ಕೆ ಶುರು ಮಾಡ್ದೆ. ಸ್ವಲ್ಪ ದಿನಕ್ಕೆ ಆ ನಿಯಮ ಹೋಯ್ತು, ಮತ್ತೆ ಮನೆಗೆ ಹೋಗಿ ಹಾಲು ಕುಡಿಯೋದು ಶುರು ಆಯಿತು, ಹಂಗೇ 10ನೇ ಕ್ಲಾಸ್ ಮುಗೀತು.  ಇನ್ನು ಮುಂದೆ ಪಿ.ಯು. ಕಾಲೇಜು,  ಇದ್ದಿದ್ದು  3 ಕಿ.ಮೀ. ದೂರ. ಮಧ್ಯಾಹ್ನ ಮನೆಗೆ ಬಂದು ಹೋಗೋದು ಸಾಧ್ಯ ಇರ್ಲಿಲ್ಲ. ಅಮ್ಮಂಗೆ ಮಧ್ಯಾಹ್ನ ಊಟದ್ದೇ ಚಿಂತೆ. ಅದಕ್ಕೇ ಒಂದು ಕಂಡೀಷನ್ ಹಾಕಿದ್ರು, ಊಟ ಮಾಡ್ದೆ ಇದ್ರೆ ಪಿ.ಯು. ಕಾಲೇಜು ಕಳ್ಸಲ್ಲ ಅಂತ.

ಆದ್ರೂ ನಂಗೆ ಊಟ ಮಾಡಕ್ಕೆ ಹೋದ್ರೆ ಎಲ್ಲಿ ವಾಂತಿ ಆಗ್ಬಿಡತ್ತೋ ಅನ್ನೋ ಭಯ! ಅದನ್ನ ಹೋಗ್ಸಕ್ಕೆ ಅಂತ ಆಸ್ಪತ್ರೆ ಸೇರ್ಸಿದ್ರು ಅವಾಗ!! ಈಗ ನೆನಪಿಸ್ಕೊಂಡ್ರೂ ನಗು ಬರತ್ತೆ. ನರ್ಸ್ಗಳೆಲ್ಲ ಬಿ.ಪಿ. ನೋಡಕ್ಕೆ ಬಂದಾಗ ಇಲ್ಲಿ ಯಾರು ಪೇಷಂಟ್ ಅಂತ ಆಶ್ಚರ್ಯದಿಂದ ನೋಡ್ತಾ ಇದ್ರು. ಆಮೇಲೆ ಬಂದ್ರು ಡಾಕ್ಟರ್,  ಅವ್ರು ಹಿಪನೊಟೈಜ್ ಮಾಡಕ್ಕೆ ಪ್ರಯತ್ನ ಪಟ್ರು. ಕಣ್ಣ್ ಮುಚ್ಕೋ, ಇವಾಗ ನೀನು ಹಿಂದೆ ಹಿಂದೆ ಹೋಗ್ತಿದೀಯಾ, ಈಗ ನಿಂಗೆ 5 ವರ್ಷ, ಬೀಚ್ ಅಲ್ಲಿ ಓಡ್ತಿದೀಯಾ ಅಂತ ಏನೇನೋ ಹೇಳಿದ್ರು,   ಅದೇನೂ ಕಾಣಿಸ್ದೆ ಇದ್ರೂ ಭಯಕ್ಕೆ ಅವರು ಹೇಳಿದ್ದಕ್ಕೆಲ್ಲ ಹೂಂ ಅಂದಿದ್ದೆ ನಾನು.

ಅಷ್ಟೆಲ್ಲ ಆದ್ಮೇಲೆ  ಅದೇನೋ ಇಂಜೆಕ್ಷನ್  ಕೊಟ್ಟು, ಇನ್ನು ನಿಂಗೆ ಏನೇ ತಿಂದ್ರೂ ವಾಂತಿ ಆಗಲ್ಲ ಅಂತ ಹೇಳಿದ್ ಮೇಲೇನೆ ಊಟ ಮಾಡಕ್ಕೆ ಶುರು ಮಾಡಿದ್ದು  :-D
  

2 comments:

ವಿ.ರಾ.ಹೆ. said...

ಹತ್ತು ವರ್ಷ ಹೊಟ್ಟೆಗೆ ಅನ್ನ ತಿನ್ನದೇ ಬೆಳೆದಿದ್ದೀರಲ್ಲ! ಗ್ರೇಟ್ :)

ಜ್ಯೋತಿ said...

:-)