Monday, January 9, 2017

ಚೋಪ್ಟಾ ಚಂದ್ರಶಿಲಾ (Day 2 & 3)

ಎಚ್ಚರ ಆಗಿ ಕಣ್ ಬಿಡೋ ಹೊತ್ತಿಗೆ ಹೊರಗಡೆ ತುಂಬಾ ಬೆಳಕು ಇತ್ತು. ಸಿಕ್ಕಾಪಟ್ಟೆ ಲೇಟ್ ಆಗಿರ್ಬೇಕು ಅಂತ ಮೊಬೈಲ್ ನೋಡಿದ್ರೆ, ಇನ್ನೂ 4.30! ಹೊರಗಡೆ ಹೋಗಿ ನೋಡಿದ್ರೆ ಸಾರಿ ಹಳ್ಳಿ ಸುತ್ತ ಮುತ್ತ ಎಲ್ಲಾ ತುಂಬಾ ಸುಂದರವಾಗಿ ಕಾಣಿಸ್ತಾ ಇತ್ತು. ಅಷ್ಟೊತ್ತಿಗೆ ಇನ್ನೂ ಕೆಲವರು ಎದ್ದಿದ್ರು, ಹಂಗೇ ಹರಟೆ ಹೊಡ್ಕೊಂಡು ಸುತ್ತ ಮುತ್ತ ಓಡಾಡಿದ್ವಿ.


ಇಷ್ಟು ವರ್ಷ ಟೀ ಕುಡೀದೇ ಇರೋ ನಾನು, ಅಲ್ಲಿನ ಛಳಿಗೆ ಬಿಸಿ ಬಿಸಿಯಾಗಿದೆ ಅಂತ ಟೀ ಕುಡ್ದು, ಬೆಳಗ್ಗೆ ತಿಂಡಿಗೆ ಬ್ರೆಡ್ ಬ್ರೆಡ್ ಬಟರ್ ಜಾಮ್ ತಿಂದು, ಕೊರೆಯೋ ಛಳೀಲಿ ತಣ್ಣೀರ್ ಸ್ನಾನ ಮಾಡಿ ರೆಡಿ ಆದೆ. ಇನ್ನೂ ಎಲ್ಲಾರು ಹೊರಡೋದು ಟೈಮ್ ಇದೆ ಅಂತ ಮತ್ತೆ ಹಳ್ಳಿ ಸುತ್ತ ಇನ್ನೊಂದ್ ರೌಂಡ್!
ಇವತ್ತು ಜಾಸ್ತಿ ದೂರ ಇಲ್ಲ, ಅಲ್ಲಿ ಹೋದ್ರೆ ಮಾಡಕ್ಕೆ ಬೇರೆ ಕೆಲ್ಸಾನೂ ಏನೂ ಇಲ್ಲ ಅಂತ ಟ್ರೆಕ್ ಶುರು ಮಾಡಿದ್ದು 9.30 ಗೆ. ದೇವರಿಯಾ ತಾಲ್ ಅನ್ನೋ ಕೆರೆ ಇದ್ದಿದ್ದು ಅಲ್ಲಿಂದ 2 ಕಿ.ಮೀ ದೂರ, ಇದು ಸಮುದ್ರ ಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. organised trek ಆಗಿದ್ರಿಂದ ಟೆಂಟ್, ಅಡುಗೆ ಸಾಮಾನು ಎಲ್ಲಾ ಅವರೇ ಎತ್ಕೊಂಡು ಬರ್ತಾರೆ, ನಾವು ನಮ್ಮ ಬ್ಯಾಗ್ ಒಂದು ಹೊತ್ಕೊಂಡ್ರೆ ಸಾಕು. ಅದೂ ಆಗಲ್ಲ ಅಂತ ಇದ್ರೆ, ಪೋರ್ಟ/ಮ್ಯೂಲ್ ವ್ಯವಸ್ಥೆ ಮಾಡಿ ಕೊಡ್ತಾರೆ.        
ಮೊದಲನೇ ಟ್ರೆಕ್ ಆಗಿದ್ದಕ್ಕೆ ಸ್ವಲ್ಪ ಹತ್ತೋವಷ್ಟರಲ್ಲೇ ಸುಸ್ತು! ಅಲ್ಲಲ್ಲಿ ನಿಂತು ಅಂತೂ ಇಂತೂ ಮೇಲೆ ತಲುಪಿದ್ವಿ. ಇಲ್ಲಿ ಮೇಲೆ ಒಂದೆರಡು ಅಂಗಡಿಗಳು ಇವೆ, ಅಲ್ಲಿ ಟೀ/ಬಿಸ್ಕತ್/ಚಿಪ್ಸ್ ಸಿಗತ್ತೆ


ಅಲ್ಲಿ ಹೋಗಿ ಟೆಂಟ್ ಹಾಕೋದು ಹೇಗೆ ಅಂತ ಕಲಿತ್ವಿ. ಟೆಂಟ್ ಹಾಕೋವಷ್ಟರಲ್ಲಿ ಮತ್ತೆ ಮಳೆ, ಚೆನ್ನಾಗಿತ್ತು ಮಳೇಲಿ ಸುತ್ತಾಡಕ್ಕೆ. ಅಲ್ಲಿ ಅಡುಗೆಗೆ ಬೇರೆ ಟೆಂಟ್, ಊಟ ಮಾಡಕ್ಕೆ ದೊಡ್ಡ ಡೈನಿಂಗ್ ಟೆಂಟ್!  
ಎಲ್ಲದಕ್ಕಿಂತ ಜಾಸ್ತಿ ಟೆನ್ಶನ್ ಇದ್ದಿದ್ದು ಟಾಯ್ಲೆಟ್ ಕತೆ ಏನು ಅಂತ, ನೋಡಿದ್ರೆ ಅದಕ್ಕೂ ಒಂದು ಟೆಂಟ್ :-D

ಆ ಕೆರೇಲಿ ಯಾವಾಗ್ಲೂ ನೀರು ಇದ್ದೆ ಇರತ್ತೆ, ನೀರು ಬತ್ತೋದೆ ಇಲ್ಲ, ಅಲ್ಲಿ ನಾಗದೇವತೆ ಸ್ನಾನ ಮಾಡ್ತಾ ಇದ್ರು, ದೇವತೆಗಳೆಲ್ಲಾ ಬರ್ತಾ ಇದ್ರೂ ಅದಕ್ಕೆ ದೇವರಿಯ ತಾಲ್ ಅಂತ ಹೆಸರು ಬಂದಿದ್ದು ಅಂತ ಬಾಬ್ಬಿ ಕತೆ ಹೇಳಿದ್ರು.
ಕೆರೆ ಸುತ್ತ ಮತ್ತೆ ಒಂದು ರೌಂಡ್ ಹಾಕಿ ನೋಡಿದ್ರೆ ಅಲ್ಲಿ ಒಂದು ವ್ಯೂ ಪಾಯಿಂಟ್ ಮಾಡಿದ್ದಾರೆ, ಅಲ್ಲಿಂದ ಹಿಮ ಮುಚ್ಚಿದ ಗುಡ್ಡ ಬೆಟ್ಟಗಳನ್ನು ನೋಡ್ಬಹುದು. ಅದೇನೋ ಗೊತ್ತಿಲ್ಲ, ಹಿಮ ನೋಡೋದು, ಅದ್ರಲ್ಲಿ ಆಡೋದು ಅಂದ್ರೆ ತುಂಬಾ ಖುಷಿ ಕೊಡತ್ತೆ :-)

ಸಂಜೆ ಸನ್ಸೆಟ್ ನೋಡಿ, ಅಂಗಡಿ ಕಡೆ ಹೋದ್ವಿ, ಇನ್ನೊಂದು ರೌಂಡ್ ಟೀ ಕುಡ್ದು  ಹಾಡು ಹೇಳ್ತಾ ಟೈಮ್ ಹೋಗಿದ್ದೆ ಗೊತ್ತಾಗ್ಲಿಲ್ಲ.
ಟೆಂಟ್ ಹತ್ರ ವಾಪಾಸ್ ಬಂದ್ರೆ ಊಟ ರೆಡಿ ಇತ್ತು. ಹೊರಡೋಕ್ಕೆ ಮುಂಚೆ ಎಲ್ಲರು ಹೆದ್ರಿಸಿದ್ರು, ಟ್ರೆಕ್ ಹೋದ್ರೆ ಅಲ್ಲಿ ಬರೀ ಮ್ಯಾಗಿ ಕೊಡ್ತಾರೆ ಅಂತ.  ಅಲ್ಲಿ ನೋಡಿದ್ರೆ ಮೃಷ್ಟಾನ್ನ ಭೋಜನ. ಬೆಳಗ್ಗೆ ಬೆಡ್ ಟೀ, ತಿಂಡಿಗೆ ಉಪ್ಪಿಟ್ಟು, ಮಧ್ಯಾಹ್ನ ಚಪಾತಿ + ಪಲ್ಯ + ನೂಡಲ್ಸ್, ಸಂಜೆ ಟೀ + ಮಂಡಕ್ಕಿ/ಜೋಳ ಪುರಿ, ರಾತ್ರಿ ಮತ್ತೆ ಚಪಾತಿ + ಪಲ್ಯ + ಬಾತ್ + ಸ್ವೀಟ್ !
ಟೆಂಟ್ ಅಲ್ಲಿ ಮಲಗಕ್ಕೆ ಸ್ಲೀಪಿಂಗ್ ಬ್ಯಾಗ್, ಥರ್ಮಲ್ ಲೈನರ್ ಎಲ್ಲ ಅವರೇ ಕೊಟ್ರು, ಅದರ ಒಳಗೆ ತೂರಿಕೊಂಡ್ರೆ ಬಸವನ ಹುಳುವಿನ ಥರ, ಕೈ ಕಾಲು ಅಲ್ಲಾಡಿಸಕ್ಕೂ ಆಗಲ್ಲ. ಹೇಗೇ ಇದ್ರೂ ಹತ್ತಿದ್ ಸುಸ್ತಿಗೂ ಏನೋ ಸಕತ್ ನಿದ್ದೆ ಬಂತು.
ಮರುದಿನ ಮತ್ತೆ ಬೆಳಗ್ಗೆ 4-4.30 ಗೆ ಎಚ್ರ ಆಯ್ತು. ಟ್ರೆಕ್ ಒರಿಜಿನಲ್ ಪ್ಲಾನ್ ಪ್ರಕಾರ ಅವತ್ತು ರೋಹಿಣಿ ಬುಗ್ಯಾಲ್(ಹುಲ್ಲುಗಾವಲು) ಅನ್ನೋ ಜಾಗಕ್ಕೆ ಹೋಗಿ ಅಲ್ಲಿ ರಾತ್ರಿ ಉಳ್ಕೋಬೇಕಿತ್ತು. ಆದ್ರೆ ಅಲ್ಲಿ ಟೆಂಟ್ ಹಾಕಕ್ಕೆ ಪರ್ಮಿಷನ್ ಸಿಗ್ದೆ ಇರೋ ಕಾರಣ ಮತ್ತೆ ಕೆಳಗೆ ಇಳಿದು ಸಾರಿ. ದಾರಿಲಿ ಶಿವಂದು ಚಿಕ್ಕ ಗುಡಿ ಇದೆ, ಅಲ್ಲಿ ಹೋಗಿ ದರ್ಶನ ಮಾಡ್ಕೊಂಡು ಬಂದ್ವಿ 

ಅಲ್ಲಿಂದ ಟಿ.ಟಿ.ಲಿ ಚೋಪ್ಟಾ. ಯಾವುದೊ ಗೋ ಶಾಲೆ ಕೆಳಗೆ ನಮ್ಮ ಕ್ಯಾಂಪ್, ಮತ್ತೆ ಟೆಂಟ್ ಎಲ್ಲಾ ಹಾಕಿ, ಇಡೀ ದಿನ ಅಲ್ಲಿ ಇಲ್ಲಿ ಸುತ್ತಾಡಿದ್ವಿ. ಟ್ರೆಕ್ ಬದ್ಲು ಪಿಕ್ ನಿಕ್ ಥರ ಆಗಿತ್ತು ಅಲ್ಲಿವರೆಗೆ. ಯಾವತ್ತೂ ಮಜವಾಗಿ ತಿಂದು, ರಾತ್ರಿ ಸುಮಾರು ಹೊತ್ತು ಹರಟೆ ಹೊಡೆದು ಆಮೇಲೆ ನಿದ್ದೆ.  

No comments: