Sunday, July 19, 2009

ಬೆಂಗಳೂರಲ್ಲಿ ಎರಡು ವರ್ಷ!

ಹುಟ್ಟಿದ್ದರಿಂದ ಹಿಡಿದು ಪಿ.ಯು.ಸಿ. ವರೆಗೂ ಮನೆ ಬಿಟ್ಟು ಎಲ್ಲೂ ಹೋಗದ ನಾನು, ಮೈಸೂರಲ್ಲಿ ೪, ಬೆಂಗಳೂರಲ್ಲಿ ೨ ವರ್ಷ ಕಳೆದೆ ಎಂದರೆ ನನಗೆ ಆಶ್ಚರ್ಯ! ಮೈಸೂರಲ್ಲಿ ಇಂಜಿನಿಯರಿಂಗ್ ಓದಲು ಹೋದಾಗ ಅಷ್ಟೇನೂ ಅಳುಕಿರಲಿಲ್ಲ, ಅಣ್ಣನೂ ಮೈಸೂರಲ್ಲೇ ಇದ್ದುದು ಒಂದು ಕಾರಣ! ಆದರೆ ಬೆಂಗಳೂರಿಗೆ ಬರುವಾಗ ಸ್ವಲ್ಪ ಭಯ, ಈ ಬೆಂಗಳೂರಿನ ವೇಗಕ್ಕೆ ಹೊಂದಿಕೊಳ್ಳುತ್ತೇನೋ ಇಲ್ಲವೋ ಎಂಬ ಯೋಚನೆ ಇತ್ತು.

ಬೆಂಗಳೂರಿಗೆ ಬಂದಾಗ ಕಂಪನಿ ಕಡೆಯಿಂದ ಮಾರತ್ ಹಳ್ಳಿಯಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ೧೫ ದಿನಗಳ ಕಾಲ ಉಳಿಯುವ ಅವಕಾಶ ಕೊಟ್ಟಿದ್ದರು, ಅಷ್ಟು ದಿನಗಳ ಒಳಗೆ ನಮ್ಮ ಠಿಕಾಣಿ ನಾವೇ ಹುಡುಕ ಬೇಕಾಗಿತ್ತು. ನಾನು ಹಾಗೂ ನನ್ನ ಗೆಳತಿಯರು ಬಿ.ಟಿ.ಎಂ. ಹಾಗೂ ಕೋರಮಂಗಲದಲ್ಲಿ ಪಿ.ಜಿ. ಹುಡುಕಲು ಶುರು ಮಾಡಿದೆವು. ಎರಡು ದಿನ ಹುಡುಕಾಡಿ ಅಂತೂ ಇಂತೂ ರಾಷ್ಟೀಯ ಕ್ರೀಡಾ ಗ್ರಾಮದಲ್ಲಿ(national games village: NGV) ಒಂದು ಪಿ.ಜಿ.ಯಲ್ಲಿ ಉಳಿಯುವುದಾಗಿ ನಿರ್ಧಾರ ಮಾಡಿ ಎರಡು ಮೂರು ದಿನಗಳೊಳಗೆ ಅಲ್ಲಿಗೆ ಸಾಮಾನು ಸರಂಜಾಮುಗಳನ್ನು ಸಾಗಿಸಿದೆವು! ಅಪ್ಪ ಅಮ್ಮ ಇಲ್ಲದೆ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಅಂತ ನನಗೆ ಖಂಡಿತವಾಗಿಯೂ ಗೊತ್ತಿರಲಿಲ್ಲ!

ಪಿ.ಜಿ. ಯಲ್ಲಿ ಒಂದು ವರ್ಷ ಇದ್ದಾಗ ಎಂತೆಂತಾ ಹುಡುಗಿಯರ ಜೊತೆ ಇದ್ದೆ ಅಂತ ಈಗ ಯೋಚನೆ ಮಾಡಿದರೆ ಹೌದಾ, ನಾನು ಇದ್ದದ್ದು ನಿಜವಾ ಅಂತ ಈಗ ಅನಿಸುತ್ತದೆ! ಆ ಮೂರು ತಮಿಳು ಹುಡುಗಿಯರು, ಮಧ್ಯ ರಾತ್ರಿ ತನಕ ಏನೇನೋ ಹರಟೆ ಹೊಡೆಯುತ್ತಿದ್ದದ್ದು, ಆರು ಜನ ಉತ್ತರ ಭಾರತದವರು ಎಲ್ಲವರಲ್ಲೂ, ಎಲ್ಲದರಲ್ಲೂ ತಪ್ಪು ಹುಡುಕುತ್ತಿದ್ದದ್ದು, ಇನ್ನೊಂದು OCD(Obsessive–compulsive disorder) ಇದ್ದ ಹುಡುಗಿ, ಹೀಗೆ ನಮೂನೆವಾರು ಜನ! ಆದರೆ ಇವರಲ್ಲದೆ ಒಂದಷ್ಟು ಒಳ್ಳೆ ಹುಡುಗಿಯರೂ ಸ್ವಲ್ಪ ಸ್ವಲ್ಪ ಸಮಯ ಇದ್ದು ಉಳಿದವರ/ಪಿ.ಜಿ. ಮಾಲೀಕರ ಕಾಟ ತಡೆಯಲಾಗದೆ ಓಡಿ ಹೋದವರೂ ಇದ್ದರು! ಊಟ ತಿಂಡಿಯ ವಿಷಯಕ್ಕೆ ಬಂದರೆ ಒಂದು ವರ್ಷ ಹೆಚ್ಚು ಕಮ್ಮಿ ಎಲ್ಲ ದಿನ ಬೆಳಗ್ಗೆ ಪರಾಟ, ಮೂರು ಸರ್ತಿ ಅಡಿಗೆವರು ಬದಲಾದರೂ ಕೂಡ. ಊರಲ್ಲಿ, ಮೈಸೂರಲ್ಲಿ ಏನೂ ತಿನ್ನದೇ ಇದ್ದವಳು ಇಲ್ಲಿ ಏನು ಕೊಟ್ಟರೂ ತಿನ್ನುತ್ತಿದ್ದೆ! ಮೊದಲಿನ ಮಾಲೀಕರು ತಂಗಳು/ಹಳಸಿದ್ದು ತಂದು ಕೊಟ್ಟರೆ ನಂತರದಲ್ಲಿ ಒಂದು ತಮಿಳು ಹೆಂಗಸು ಬಂದು ಅಡಿಗೆ ಮಾಡುತ್ತಿದ್ದರು. ಆಮೇಲೆ ಬಂದ ಬೆಂಗಾಲಿ ಅಡಿಗೆಯಲ್ಲಿ ಯಾವುದೇ ತರಕಾರಿ ಮಾಡಿದರೂ ಆಲೂಗಡ್ಡೆ ಹಾಕದೆ ಇರುತ್ತಿರಲ್ಲಿ. ಇದೇ ನಾನು ಊದಿಕೊಳ್ಳಲು ಮುಖ್ಯ ಕಾರಣ ಇರಬೇಕು.

ಅಲ್ಲಿ ಒಂದು ವರ್ಷ ಇದ್ದು, ಇನ್ನು ಇಲ್ಲಿ ಇರಲು ಸಾಧ್ಯವಿಲ್ಲ ಅಂತ ಅನಿಸಿದ ಮೇಲೆ ೪ ಗೆಳತಿಯರ ಜೊತೆ ಕೋರಮಂಗಲದಲ್ಲಿ ಮನೆ ಬಾಡಿಗೆ ತೆಗೆದುಕೊಂಡೆವು. ಅಲ್ಲಿಂದ ಮುಂದೆ ಅಡಿಗೆಯಲ್ಲಿ ನನ್ನ ಪ್ರಯೋಗಗಳು ಶುರು, ನನ್ನ ಗೆಳತಿಯರೇ ಬಲಿ ಪಶುಗಳು!! ಅನ್ನ ಕೂಡಾ ಇಡಲು ಬಾರದ ಹುಡುಗಿ ಈಗ ಅನ್ನ/ಸಾರು/ಪಲ್ಯ ಇತ್ಯಾದಿ ಎಲ್ಲವನ್ನೂ ಚೆನ್ನಾಗಿ( ನಂಬಿಕೆ ಬಾರದಿದ್ದರೆ ನನ್ನ ಗೆಳತಿಯರನ್ನೇ ಕೇಳಿ ನೋಡಿ) ಮಾಡಲು ಕಲಿತದ್ದೂ ಆಶ್ಚರ್ಯದ ವಿಷಯ!

ಮನೆ ಬಿಟ್ಟರೆ ಶಾಲೆ, ಬಿಟ್ಟರೆ ಮನೆ, ಇಷ್ಟೇ ನನ್ನ ಪ್ರಪಂಚ ಆಗಿತ್ತು. ಸರಿಯಾಗಿ ಬಸ್ ಹಿಡಿದು ಅಜ್ಜಿ ಮನೆಗೆ ಒಬ್ಬಳೇ ಹೋಗಲೂ ಭಯ! ಅಂತಾ ಹುಡುಗಿ ಬೆಂಗಳೂರಿನಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಓಡಾಡಲು ಕಲಿತಿದ್ದೇನೆ ಎಂದರೆ ನನ್ನ ಅಪ್ಪ ಅಮ್ಮನಿಗಂತೂ ನಂಬಲೂ ಆಗುತ್ತಿಲ್ಲ.

ಈ ಎರಡು ವರ್ಷಗಳಲ್ಲಿ ಬೆಂಗಳೂರು ತುಂಬಾ ವಿಷಯಗಳನ್ನು ಕಲಿಸಿದೆ. ಎಲ್ಲವನ್ನೂ ಕೊಟ್ಟ ಬೆಂಗಳೂರಿಗೆ ಒಂದು ತುಂಬು ಹೃದಯದ ನಮನ.