Sunday, March 29, 2009

ಸಂಕ್ರಾಂತೀಈಈಈ...... ಇದು ಧರ್ಮ ಸಂಕ್ರಾಂತಿ..

ಇದೇನಿದು, ಯುಗಾದಿ ಸಮಯದಲ್ಲಿ ಸಂಕ್ರಾಂತಿ ಬಗ್ಗೆ ಬರೆಯುತ್ತಿದ್ದೇನೆ ಅಂದುಕೊಳ್ಳುತ್ತಿದ್ದೀರಾ?
ಧರ್ಮ ಸಂಕ್ರಾಂತಿ ಅನ್ನುವುದು ಒಂದು ಯಕ್ಷಗಾನ ಪ್ರಸಂಗ. ಸಂದೀಪ್ ಕಾಮತರು ಕ್ಯಾಸೆಟ್ ಬಗ್ಗೆ ಬರೆದಾಗ ನಮ್ಮ ಮನೆಯಲ್ಲಿ ತುಂಬಿಕೊಂಡಿದ್ದ ರಾಶಿ ರಾಶಿ ಕ್ಯಾಸೆಟ್ ಗಳು ನೆನಪಾದವು. ಅದರಲ್ಲಿ ನನಗೆ ತುಂಬಾ ಇಷ್ಟವಾದ ಕ್ಯಾಸೆಟ್ ಗಳಲ್ಲಿ ಒಂದು ಧರ್ಮ ಸಂಕ್ರಾಂತಿ ಯಕ್ಷಗಾನದ್ದು. ಯಾವ ಮೇಳ ಎನ್ನುವುದೂ ನೆನಪಿಲ್ಲ, ಆದರೆ ಅದರ ಸುಮಾರು ಹಾಡುಗಳು, ಸಂಭಾಷಣೆಗಳು ಮರೆಯುವುದು ಸಾಧ್ಯವೇ ಇಲ್ಲ.
ಕಥೆ ನಾನು ಹೇಳಬಯಸುವುದಿಲ್ಲ. ಒಂದಷ್ಟು ಸನ್ನಿವೇಶಗಳು/ಹಾಡುಗಳನ್ನು ಮಾತ್ರ ನೆನಪಿಸಿಕೊಂಡು ಬರೆಯುತ್ತಿದ್ದೇನೆ.
ಹಾಗೇ ಬರೆಯುವಾಗ ಒಂದಷ್ಟು ಪದಗಳು ತಪ್ಪಾಗಿರಬಹುದು, ದಯವಿಟ್ಟು ಕ್ಷಮಿಸಿ.

ಮೊದಲಿಗೆ ನೆನಪಾಗುವುದು ಪ್ರಾಸಬದ್ಧವಾಗಿ ಗುರು-ಶಿಷ್ಯರು ಆಡುವ ಮಾತುಗಳು. ಶಿಷ್ಯನಿಗೆ ವಿಧಿಯಲ್ಲಿ ನಂಬಿಕೆ ಇಲ್ಲ.
ಶಿಷ್ಯ: ಜಾತಕ ಫಲವದು ನಿಜವೇ?
ಗುರು: ಅದು ನಿಜವೇ..
ಎಷ್ಟು ಚೆನ್ನಾಗಿ ಭಾಷೆಯನ್ನೂ ಬಳಸಿಕೊಂಡಿದ್ದಾರೆ ಇಲ್ಲಿ. ಶಬ್ದ ಅದೇ ಆದರೂ ಆಡುವ ಮಾತಿನಿಂದಾಗಿ ಒಂದು ಪ್ರಶ್ನೆಯಾದರೆ ಇನ್ನೊದು ಉತ್ತರ!

ಕಥೆ ತುಂಬಾ ಮುಂದುವರಿದ ಮೇಲೆ ಮುಘಲರು ಆವಂತಿಯ ಮೇಲೆ ಆಕ್ರಮಣ ಮಾಡುವ ಮೊದಲು ಒಂದಷ್ಟು ಜನರನ್ನು ಆವಂತಿಯ ಮೇಲೆ ಗೂಡಚಾರಿಕೆ ಮಾಡಲು ಕಳಿಸುತ್ತಾರೆ. ಅವರು ವೇಷ ಮರೆಸಿಕೊಂಡು ಬಂದ ಸಂದರ್ಭ, ಮಡಿವಾಳ ರಾಜಕುಮಾರನಲ್ಲಿ ನ್ಯಾಯ ಕೇಳಲು ಬಂದಿದ್ದಾನೆ.
ಹಾಡು೧:
ಮಡಿವಾಳ ಮಾಚಯ್ಯ ಬಂದ,
ಎನಗೆ ಕೊಡಿಸಯ್ಯ ನ್ಯಾಯವನೆಂದ..
ಮಡದಿಯ ಪಡೆಯಲು ನಾನು..
ಸಾಲ ಪಡೆದೆನು, ಸಾಲ ಪಡೆದೆನು
ಕರುಣಾಳು ನೀನು..

ಹಾಡು೨:
ಕತ್ತೆಯಾ, ಕನ್ನೆ ಕಟ್ಟೆಯ ಒತ್ತೆಯಿಟ್ಟೆ..
ಆ ರನ್ನೇ.... ಬಸುರಿ,
ಬಸುರಿ ಆ ರನ್ನೇ ನಾನು ಕೆಟ್ಟೆ...

ಮುಂದೆ ಮುಘಲರು ಸಂಕ್ರಾಂತಿಯ ದಿನ ಆವಂತಿಯ ಮೇಲೆ ಆಕ್ರಮಣ ಮಾಡುವುದಾಗಿ ನಿರ್ಧಾರ ಮಾಡುತ್ತಾರೆ. ಆಗಲೂ ಇಬ್ಬರು ಮುಸ್ಲಿಮರು ಬ್ರಾಹ್ಮಣರ ಹಾಗೆ ವೇಷ ಮರೆಸಿಕೊಂಡು ಅವನತಿಗೆ ಬರುತ್ತಾರೆ. ರಾಜಕುಮಾರಿಯನ್ನು ಅಪಹರಿಸಿ ಅದೇ ಸಮಯದಲ್ಲಿ ಆಕ್ರಮಣ ಮಾಡುವುದು ಅವರ ಉದ್ದೇಶ.

ಅವರನ್ನು ನೋಡಿದ ಕೂಡಲೇ ರಾಜ ನೀವು ಈ ಊರಿನವರ ಹಾಗೆ ಕಾಣಿಸುತ್ತಿಲ್ಲ, ಯಾರು ನೀವು ಯಾವ ಊರು ಎಂದು ಕೇಳಿದ ಕೂಡಲೇ ಬರುವ ಹಾಡು:
ಕಾಶೀ ಕ್ಷೇತ್ರದ ಕಾಶೀ ವಿಶ್ವರು
ದೇಶ ಸಂಚಾರಕೆ ಹೊರಟವರು..
ಕಾಶೀ.. ವಿಶ್ವ...

ಕಾಶಿ: ಎಮ್ಮ ಪರಿಚಯವೇ? ಎನ್ನ ಹೆಸರು ಕಾಶಿ ಎಂದು. ಎನ್ನಪ್ಪ .....(ಹೆಸರು ಮರೆತು ಹೋಗಿದೆ), ಎನ್ನಮ್ಮ ..... ದಶಮ ಗರ್ಭ ಸಂಜಾತನಿರ್ಪೆ. ಈತ ವಿಶ್ವ, ಕಾಯಿಸಿಪ್ಪೆಯಲ್ಲೇ ಹುಟ್ಟಿದವನು
ರಾಜ: ??
ಕಾಶಿ: ಕಾಶ್ಯಪ ಗೋತ್ರದವನು, ಕಾಯಿಸಿಪ್ಪೆಯಲ್ಲಿ ಹುಟ್ಟಿದವನು.
ವಿಶ್ವ: ಹೌದೌದು, ಎನ್ನ ಜನನ ಕಾಲದಲ್ಲಿ ಅವಘಡ ಒಂದು ಆಗಿರ್ಪುದು. ಎನ್ನಮ್ಮ ಎನ್ನ ಹೆತ್ತ ಹಸೆಯಲ್ಲಿಯೇ ಇಹ ಲೋಕವನ್ನು ತ್ಯಜಿಸಿ ಹೋಗಿರ್ಪಳು. ಅಷ್ಟು ಮಾತ್ರವಲ್ಲ, ಎನ್ನ ಹಿರಿಯ ಹೆಂಡತಿಯೊಬ್ಬಳು(???) ಓಡಿ ಹೋಗಿರ್ಪಳು.
ಇನ್ನೊಂದಷ್ಟು ಉಭಯ ಕುಶಲೋಪರಿ ನಡೆಸಿದ ಮೇಲೆ:
ಕಾಶಿ: ಇಂದು ನಾಳೆ ಎಂತದೋ ಹಬ್ಬ ಉಂಟಲ್ಲ
ವಿಶ್ವ: ಹಬ್ಬ ಹಬ್ಬ ರಂಜಾನ್!!
ಕಾಶಿ: ಸರಿ ಮಾಡಲು ಹೇಳದ ಶಬ್ದವನ್ನು ಹೇಳಿದರೆ ನಾನು ಹೇಗೆ ಸರಿ ಮಾಡಿ ಸಾಯಲಿ. ರಂಜನೀಯವಾಗಿರುವುದಂತೆ?
ರಾಜ: ಹೌದು, ಇಂದು ಧರ್ಮ ಸಂಕ್ರಾಂತಿ. ಗಾಯನ ನೃತ್ಯ ಭೋಜನ ಎಲ್ಲ ನಡೆಯುವುದು.
ಕಾಶಿ: ಧರ್ಮ ಸಂಕ್ರಾಂತಿಯ ಉತ್ಸವವನ್ನು ಧರ್ಮಕ್ಕೆ ನೋಡಿ ಹೋಗಲು ಬಂದವರು.
ರಾಜ: ಧರ್ಮಕ್ಕೇ ನೋಡಲು ಬಂದವರೋ?
ಕಾಶಿ: ಊರೂರು ತಿರುಗುವ ಎಮ್ಮಲ್ಲಿ ಕಾಸೆಲ್ಲಿ?
ರಾಜ: ನೋಡುವುದಕ್ಕೆ ಅವಕಾಶವುಂಟು, ಹೀಗೆ ಬನ್ನಿ..

ರಾಜ ಅವರನ್ನು ನೃತ್ಯ ನಡೆಯುವ ಸಭೆಯ ಬಳಿ ಕರೆದುಕೊಂಡು ಹೋಗುತ್ತಾನೆ.
ಕಾಶಿ, ವಿಶ್ವ: ಅಲ್ಲಾ, ಅಲ್ಲಾ, ಅಲ್ಲಾ...
ರಾಜ: ನೀವು ಯಾವ ಜಾತಿಯವರು?
ಕಾಶಿ: ನಾವು ಬ್ರಾಹ್ಮಣರೇ ಇರ್ಪೆವು.
ರಾಜ: ಇಲ್ಲಿ ನಡೆಯುತ್ತಿರುವೆದೆಲ್ಲಾ ಹೌದು, ಹಾಗಿರುವಾಗ ನೀವು ಅಲ್ಲಾ ಅನ್ನಲು ಕಾರಣ?
ಕಾಶಿ: ಅಲ್ಲಾ ಎನ್ನಲು ಕಾರಣ ಇರ್ಪುದಲ್ಲಾ(ಇರ್ಪುದು+ಅಲ್ಲಾ!)
ರಾಜ:??
ಕಾಶಿ: ನಾವು ಇಲ್ಲಿಗೆ ಬಂತಲ್ಲಾ, ಬಂದು ಇಲ್ಲಿ ನಿಂತೆವಲ್ಲಾ..
ಕಾಶಿ: ಇಲ್ಲಿ ಕಟ್ಟಿರುವ ಜಾಲರಿಯೇನ್, ಜೋಲರಿಯೇನ್.. ಗಾಯಕರೇನ್, ವಾದಕರೇನ್ , ಬಾಧಕರೇನ್(??).. ಇದೆಲ್ಲ ನೋಡಿದ ನಮಗೆ ಇದೇನು ಇಂದ್ರಲೋಕವೋ, ಚಂದ್ರಲೋಕವೋ, ಯಮಲೋಕವೋ(??), ಶನಿಲೋಕವೋ(??)..
ರಾಜ: ಎಲ್ಲ ಲೋಕದ ದರ್ಶನವೂ ಆಯಿತೋ?
ಕಾಶಿ: ಹ್ಮ್.., ಅದೆಲ್ಲ ಅಲ್ಲಾ!! ಅಲ್ಲಾ ಎನ್ನಲು ಇಷ್ಟುದ್ದ ಕಾರಣವಿರ್ಪುದು!!

ನಂತರ Title song..
ಅದ್ಭುತ ಗಾಯನ.
ಸಂಕ್ರಾಂತೀಈಈಈಈ..... ಹೆಚ್ಚು ಕಮ್ಮಿ ಮೂರು ನಿಮಿಷ ಇದೆ ರೀತಿ ಆಲಾಪನೆ ಮಾಡುವುದು ಸಾಮಾನ್ಯದ ಮಾತಲ್ಲ.
ಇದು ಧರ್ಮ ಸಂಕ್ರಾಂತಿ.
ಶುಭದ ಧರ್ಮ ಸಂಕ್ರಾಂತಿ ..

ವಿಧಿಯ ನೆಲೆಗಟ್ಟು, ವಿಧಿಯ ಚೌಕಟ್ಟು
ವಿಧಿಯೇ ಧರ್ಮದ ಒಳ ಗುಟ್ಟು..

ಧರ್ಮದ ಹಣತೆಗೆ ಧರ್ಮದ ತೈಲವಿಕ್ಕಿ
ಧರ್ಮದ ಜ್ಯೋತಿಯ ಬೆಳಗೋಣ..

ಕೆಟ್ಟದ್ದ ನೋಡಬೇಡ, ಕೆಟ್ಟದ್ದ ಕೇಳಬೇಡ
ಕೆಟ್ಟದ್ದನ್ನೆಂದೂ ಮಾಡಬೇಡವೋ, ನೀ ಕೆಟ್ಟದ್ದನ್ನೆಂದೂ ಮಾಡಬೇಡವೋ..
ತಾನಿ ತಂದಾನ ತಾನಿ ತಂದನಾನ, ತಂದಾನೆ ತಂದನಾನಿ ತಂದನಾನೋ..

ಈ ಹಾಡು ಮುಗಿದ ಮೇಲೆ ಕಾಶಿ ಹಾಗೂ ವಿಶ್ವ ರಾಜಕುಮಾರಿಯನ್ನು ಭೇಟಿ ಮಾಡುತ್ತಾರೆ.
ನೆನಪಿನಲ್ಲಿರುವ ಒಂದಷ್ಟು ಮಾತುಗಳು:
ರಾಜಕುಮಾರಿ: ಹೇಗಿತ್ತು ಗಾಯನ?
ಕಾಶಿ: ತಾನಿ ತಂದಾನ, ತಂದ ತಾನೇ ತಿಂದಾನ..
ರಾಜಕುಮಾರಿ: ನಿಲ್ಲಿಸಿ, ಏನದು?
ವಿಶ್ವ: ಅವ ಹೇಳಿದ್ದರಲ್ಲಿ ತಪ್ಪೇನು? ತಾನು ತಂದದ್ದನ್ನು ತಾನು ತಿನ್ನದೇ ಇನ್ಯಾರು ತಿನ್ನುತಾನೆ? !!
ರಾಜಕುಮಾರಿ: ಹಾಗಲ್ಲ ಅದು, ತಂದಾನ ತಾನಿ ತಂದಾನ ಅಂತ. ಒಂದು ಬಗೆಯ ತಿಲ್ಲಾನ. ಹಾಡು ಹೇಗನಿಸಿತು?
ಕಾಶಿ: ಕೆಟ್ಟದ್ದ ನೋಡಬೇಡ, ಕೆಟ್ಟದ್ದ ಕೇಳಬೇಡ
ವಿಶ್ವ: ಕೆಟ್ಟದ್ದನ್ನೆಂದೂ ಆಡಬೇಡವೋ, ನೀ ಆಡಬೇಡವೋ.. ಯಾರಿಗೆ ಹೇಳಿದ ಮಾತು ಇದು?
ರಾಜಕುಮಾರಿ: ನಿಮಗೆ ಹೇಳಿದ್ದು.
ಕಾಶಿ: ನಾವೇನು ಕೆಟ್ಟದ್ದ ಮಾಡಿದ್ದೇವೆ?
ವಿಶ್ವ: ಒಮ್ಮೆ ಮಾಡಿದ್ದರೂ ಅದನ್ನು ನೋಡಿದವರು ಯಾರು?
ರಾಜಕುಮಾರಿ: ಹಾಗಲ್ಲ, ಅದು ಸರ್ವರಿಗೂ ಹೇಳಿದ ಮಾತು.
ವಿಶ್ವ: ಸರ್ವೇಯರಿಗೆ ಹೇಳಿದ ಮಾತೋ?
ಕಾಶಿ: ಇಲ್ಲ ಪಟೇಲರಿಗೆ ಹೇಳಿದ್ದು, ಸುಮ್ಮನಿರು

ಇನ್ನೂ ಒಂದಷ್ಟು ಹಾಸ್ಯಭರಿತ ಸಂಭಾಷಣೆಯ ನಂತರ ಏನೋ ಪಿತೂರಿ ಮಾಡಿ ರಾಜಕುಮಾರಿಯನ್ನು ಅಪಹರಿಸಿ ತಮ್ಮ ರಾಜನ ಬಳಿಗೆ ಕರೆದೊಯ್ಯುತ್ತಾರೆ. ಆಗ ಬರುವ ಹಾಡು:
ಪ್ಯಾರಿ ಬಾರೆ ಬಳಿಗೆ..
ಪ್ಯಾರೀ.. ಪ್ಯಾರೀ..
ಪ್ಯಾರಿ ಬಾರೆ ಬಳಿಗೆ........
ಈ ಹಾಡು ಹಾಡುವಾಗ ಅದ್ಭುತ variations in pitch. ಕೇಳಿಯೇ ಅನುಭವಿಸಬೇಕು.

ಆಗ ನಮ್ಮ hero ಪ್ರತ್ಯಕ್ಷ! ಅವನು ಅವಳನ್ನು ರಕ್ಷಿಸಿದ ಮೇಲೆ ಮತ್ತೊಂದು ಹಾಡಿದೆ!
ಹಾಗೆ ನೋಡಿದರೆ ಯಕ್ಷಗಾನದಲ್ಲಿ ಎಲ್ಲಾ ಸನ್ನಿವೇಶಕ್ಕೂ ಒಂದೊಂದು ಹಾಡಿದೆ!!
ಕಥೆ ಮುಂದುವರಿಯುತ್ತದೆ!

ಇರುವ ಮೂರು ಭಾಗಗಳಲ್ಲಿ ಎರಡನೇ ಭಾಗದ ಕ್ಯಾಸೆಟ್ ಮಾತ್ರ ಸರಿ ಇದ್ದ ಕಾರಣ ಅದರ ಹಾಡುಗಳು/ಮಾತುಗಳು ನೆನಪಿವೆ.

ಉಳಿದದ್ದು ನೆನಪಾದರೆ ಇನ್ನೊಂದು ದಿನ ಬರೆಯುತ್ತೇನೆ. ನೀವೂ ಯಕ್ಷಗಾನ ಸಿಕ್ಕಿದರೆ ನೋಡುತ್ತೀರಲ್ಲಾ?

8 comments:

Rajesh Manjunath - ರಾಜೇಶ್ ಮಂಜುನಾಥ್ said...

ಜ್ಯೋತಿ,
ಯಕ್ಷಗಾನ ನಂಗು ತುಂಬಾನೇ ಇಷ್ಟ, ರಾತ್ರಿಯಿಡೀ ಮಾವನ ಜೊತೆ ಕುಳಿತು ಯಕ್ಷಗಾನ ಟೆಂಟ್ ನಲ್ಲಿ ಯಕ್ಷಗಾನ ನೋಡಿದ್ದು ನೆನಪಾಯಿತು. ಕರಾವಳಿಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಲೆಯ ಬಗೆಗಿನ ನಿಮ್ಮ ಆಸಕ್ತಿ ಕಂಡು ತುಂಬಾನೇ ಖುಷಿಯಾಯ್ತು. ಒಳ್ಳೆಯ ಬರಹ, ಖಂಡಿತ ಈ ಯಕ್ಷಗಾನ ಸಿಕ್ಕಲ್ಲಿ ನೋಡುತ್ತೇನೆ.

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿ...

ಈ ಕ್ಯಾಸೆಟ್ ನೋಡು ಎಂದು ನನ್ನಣ್ಣ ಕೊಟ್ಟಿದ್ದ...

ನಿನ್ನೆ ನಿಮ್ಮ ಲೇಖನ ನೋಡಿದ ಮೇಲೆ ನೋಡಿದೆ...

ತುಂಬಾ... ತುಂಬಾ.. ತುಂಬಾ.. ಚೆನ್ನಾಗಿದೆ...

ನನಗೆ ನೋಡಲು ಪ್ರೇರೇಪಿಸಿದ್ದಕ್ಕೆ ಧನ್ಯವಾದಗಳು...

ಕಣ್ಣಿಗೆ ಕಟ್ಟುವ ಹಾಗೇ ಬಣ್ಣೀಸಿಸಿದ್ದೀರಿ...

ಅಂದದ ಲೇಖನಕ್ಕೆ
ಅಭಿನಂದನೆಗಳು...

shivu said...

ಜ್ಯೋತಿ ಮೇಡಮ್,

ನನಗೂ ಯಕ್ಷಗಾನ ನೋಡಲು ಇಷ್ಟ...

ಧರ್ಮ ಸಂಕ್ರಾಂತಿಯ ....ಈ ಮಾತು ಹಾಡು ಎಲ್ಲಾ ಓದಿದೆ..ಖುಷಿಯಾಯ್ತು....ಚೆನ್ನಾಗಿದೆ...

ಇನ್ನಷ್ಟು ಇಂಥವು ಹುಡುಕಿಕೊಡಿ....

ಧನ್ಯವಾದಗಳು..

Anonymous said...

ರಾಜೇಶ್,
ನೋಡಿದ ಮೇಲೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯಬೇಡಿ.
ಹೀಗೆ ಬರುತ್ತಾ ಇರಿ.

ಪ್ರಕಾಶಣ್ಣ,
ಧನ್ಯವಾದಗಳು :-)
ಖಂಡಿತಾ ನೋಡಿ.
ಕ್ಯಾಸೆಟ್ ಎಲ್ಲಿ ಸಿಕ್ಕಿತು ಅವರಿಗೆ? ನಾನು ಈ ಯಕ್ಷಗಾನ ಕೇಳಿ ತುಂಬಾ ದಿನಗಳೇ ಆದವು.
ಮತ್ತೊಮ್ಮೆ ಕೇಳಬೇಕು, video cd ಸಿಕ್ಕಿದರೆ ನೋಡಬೇಕು ಎಂದು ಅನಿಸುತ್ತಿದೆ.

ಶಿವೂ ಅವರೇ,
ನೀವೂ ಯಕ್ಷಗಾನ ಸಿಕ್ಕಿದರೆ ನೋಡಿ.
ನಿಮ್ಮ ಅಭಿಪ್ರಾಯ ತಿಳಿಸಿ.
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

Prabhuraj Moogi said...

ಯಕ್ಷಗಾನದ ಕೆಲವು ತುಣುಕುಗಳನ್ನು ಚೆನ್ನಾಗಿ ಬರೆದಿದ್ದೀರಿ, ಆ ಮದ್ದಳೆ ಗಂಟೆಗಳ ಸದ್ದಿನಲ್ಲಿ ಅವರ ಭಾವಪೂರಿತ ಎತ್ತರಿಸಿದ ದನಿಯಲ್ಲಿ ಹಾಡುತ್ತಿರುವುದು ಕೇಳಲು ಬಹಳ ಚೆನ್ನ, ಬರೀ ಟೇವೀಯಲ್ಲಿ ನೋಡಿದ್ದೀನಿ ನೇರ ನೋಡಲು ಸಿಕ್ಕಿಲ್ಲ ಅನ್ನೋದೇ ಬೇಸರ.

ಸಾಗರದಾಚೆಯ ಇಂಚರ said...

ಜ್ಯೋತಿ, ನಿಮ್ಮ ಬರಹ ಇಷ್ಟವಾಯಿತು, ತುಂಬಾ ಚೆನ್ನಾಗಿ ಬರೆದಿದ್ದೀರಿ, ಹೀಗೆಯೇ ಬರೆಯುತ್ತಿರಿ, ಬರುತ್ತಿರುವೆ

ಜಲನಯನ said...

ಜ್ಯೋತಿಯವರೇ,
ಬರಹ ಚನ್ನಾಗಿದೆ, third dimesion ಯಕ್ಷಗಾನವೇ ಇದು?? ಬಹಳ ಚನ್ನಾಗಿದೆ..
ನಾನು ಕಂಡಿರುವುದು first dimension ಯಕ್ಷಗಾನ ಅಂದರೆ ಪೌರಾಣಿಕಥೆಯದ್ದು, ಅಂದಹಾಗೆ ಏನಿದು first, second, third dimension ಅಂತೆಲ್ಲಾ ಹೇಳ್ತಿದ್ದೀರಿ ಅಂತೀರಾ?? ಇದು ನನ್ನ definition ಅಷ್ಟೆ. ಅಂದರೆ offbeat ಎನ್ನಿ..
This is a nice "Blogicle" any way...
ಇದೇನಿದು..blogicle..??
ಇದು..article on blog...
ಬ್ಲಾಗಿಸ್ತಾ ಇರಿ, ಒಳ್ಳೆಯದಾಗಲಿ.

Basavaraju said...

ಚೆನ್ನಾಗಿದೆ ಯಕ್ಷಗಾನದ ಪ್ರಸಂಗ. ನಾನು ಮೊದಲು ಬಾರಿಗೆ ಯಕ್ಷಗಾನ ನೋಡಿದ್ದು ಹೆಗ್ಗೋಡಿನಲ್ಲಿ ಅಂದಿನಿಂದ ಆ ಕಲೆಯ ಅಭಿಮಾನಿಯಾಗಿದ್ದೇನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆಯೊಂದರಲ್ಲಿ ನಡೆಸಿದ ನಡುಮನೆ ಯಕ್ಷಗಾನ ನೋಡಿದೆ. ತುಂಬಾ ಚೆನ್ನಾಗಿತ್ತು.

Anyway, thanks for your article!