Sunday, March 29, 2009

ಸಂಕ್ರಾಂತೀಈಈಈ...... ಇದು ಧರ್ಮ ಸಂಕ್ರಾಂತಿ..

ಇದೇನಿದು, ಯುಗಾದಿ ಸಮಯದಲ್ಲಿ ಸಂಕ್ರಾಂತಿ ಬಗ್ಗೆ ಬರೆಯುತ್ತಿದ್ದೇನೆ ಅಂದುಕೊಳ್ಳುತ್ತಿದ್ದೀರಾ?
ಧರ್ಮ ಸಂಕ್ರಾಂತಿ ಅನ್ನುವುದು ಒಂದು ಯಕ್ಷಗಾನ ಪ್ರಸಂಗ. ಸಂದೀಪ್ ಕಾಮತರು ಕ್ಯಾಸೆಟ್ ಬಗ್ಗೆ ಬರೆದಾಗ ನಮ್ಮ ಮನೆಯಲ್ಲಿ ತುಂಬಿಕೊಂಡಿದ್ದ ರಾಶಿ ರಾಶಿ ಕ್ಯಾಸೆಟ್ ಗಳು ನೆನಪಾದವು. ಅದರಲ್ಲಿ ನನಗೆ ತುಂಬಾ ಇಷ್ಟವಾದ ಕ್ಯಾಸೆಟ್ ಗಳಲ್ಲಿ ಒಂದು ಧರ್ಮ ಸಂಕ್ರಾಂತಿ ಯಕ್ಷಗಾನದ್ದು. ಯಾವ ಮೇಳ ಎನ್ನುವುದೂ ನೆನಪಿಲ್ಲ, ಆದರೆ ಅದರ ಸುಮಾರು ಹಾಡುಗಳು, ಸಂಭಾಷಣೆಗಳು ಮರೆಯುವುದು ಸಾಧ್ಯವೇ ಇಲ್ಲ.
ಕಥೆ ನಾನು ಹೇಳಬಯಸುವುದಿಲ್ಲ. ಒಂದಷ್ಟು ಸನ್ನಿವೇಶಗಳು/ಹಾಡುಗಳನ್ನು ಮಾತ್ರ ನೆನಪಿಸಿಕೊಂಡು ಬರೆಯುತ್ತಿದ್ದೇನೆ.
ಹಾಗೇ ಬರೆಯುವಾಗ ಒಂದಷ್ಟು ಪದಗಳು ತಪ್ಪಾಗಿರಬಹುದು, ದಯವಿಟ್ಟು ಕ್ಷಮಿಸಿ.

ಮೊದಲಿಗೆ ನೆನಪಾಗುವುದು ಪ್ರಾಸಬದ್ಧವಾಗಿ ಗುರು-ಶಿಷ್ಯರು ಆಡುವ ಮಾತುಗಳು. ಶಿಷ್ಯನಿಗೆ ವಿಧಿಯಲ್ಲಿ ನಂಬಿಕೆ ಇಲ್ಲ.
ಶಿಷ್ಯ: ಜಾತಕ ಫಲವದು ನಿಜವೇ?
ಗುರು: ಅದು ನಿಜವೇ..
ಎಷ್ಟು ಚೆನ್ನಾಗಿ ಭಾಷೆಯನ್ನೂ ಬಳಸಿಕೊಂಡಿದ್ದಾರೆ ಇಲ್ಲಿ. ಶಬ್ದ ಅದೇ ಆದರೂ ಆಡುವ ಮಾತಿನಿಂದಾಗಿ ಒಂದು ಪ್ರಶ್ನೆಯಾದರೆ ಇನ್ನೊದು ಉತ್ತರ!

ಕಥೆ ತುಂಬಾ ಮುಂದುವರಿದ ಮೇಲೆ ಮುಘಲರು ಆವಂತಿಯ ಮೇಲೆ ಆಕ್ರಮಣ ಮಾಡುವ ಮೊದಲು ಒಂದಷ್ಟು ಜನರನ್ನು ಆವಂತಿಯ ಮೇಲೆ ಗೂಡಚಾರಿಕೆ ಮಾಡಲು ಕಳಿಸುತ್ತಾರೆ. ಅವರು ವೇಷ ಮರೆಸಿಕೊಂಡು ಬಂದ ಸಂದರ್ಭ, ಮಡಿವಾಳ ರಾಜಕುಮಾರನಲ್ಲಿ ನ್ಯಾಯ ಕೇಳಲು ಬಂದಿದ್ದಾನೆ.
ಹಾಡು೧:
ಮಡಿವಾಳ ಮಾಚಯ್ಯ ಬಂದ,
ಎನಗೆ ಕೊಡಿಸಯ್ಯ ನ್ಯಾಯವನೆಂದ..
ಮಡದಿಯ ಪಡೆಯಲು ನಾನು..
ಸಾಲ ಪಡೆದೆನು, ಸಾಲ ಪಡೆದೆನು
ಕರುಣಾಳು ನೀನು..

ಹಾಡು೨:
ಕತ್ತೆಯಾ, ಕನ್ನೆ ಕಟ್ಟೆಯ ಒತ್ತೆಯಿಟ್ಟೆ..
ಆ ರನ್ನೇ.... ಬಸುರಿ,
ಬಸುರಿ ಆ ರನ್ನೇ ನಾನು ಕೆಟ್ಟೆ...

ಮುಂದೆ ಮುಘಲರು ಸಂಕ್ರಾಂತಿಯ ದಿನ ಆವಂತಿಯ ಮೇಲೆ ಆಕ್ರಮಣ ಮಾಡುವುದಾಗಿ ನಿರ್ಧಾರ ಮಾಡುತ್ತಾರೆ. ಆಗಲೂ ಇಬ್ಬರು ಮುಸ್ಲಿಮರು ಬ್ರಾಹ್ಮಣರ ಹಾಗೆ ವೇಷ ಮರೆಸಿಕೊಂಡು ಅವನತಿಗೆ ಬರುತ್ತಾರೆ. ರಾಜಕುಮಾರಿಯನ್ನು ಅಪಹರಿಸಿ ಅದೇ ಸಮಯದಲ್ಲಿ ಆಕ್ರಮಣ ಮಾಡುವುದು ಅವರ ಉದ್ದೇಶ.

ಅವರನ್ನು ನೋಡಿದ ಕೂಡಲೇ ರಾಜ ನೀವು ಈ ಊರಿನವರ ಹಾಗೆ ಕಾಣಿಸುತ್ತಿಲ್ಲ, ಯಾರು ನೀವು ಯಾವ ಊರು ಎಂದು ಕೇಳಿದ ಕೂಡಲೇ ಬರುವ ಹಾಡು:
ಕಾಶೀ ಕ್ಷೇತ್ರದ ಕಾಶೀ ವಿಶ್ವರು
ದೇಶ ಸಂಚಾರಕೆ ಹೊರಟವರು..
ಕಾಶೀ.. ವಿಶ್ವ...

ಕಾಶಿ: ಎಮ್ಮ ಪರಿಚಯವೇ? ಎನ್ನ ಹೆಸರು ಕಾಶಿ ಎಂದು. ಎನ್ನಪ್ಪ .....(ಹೆಸರು ಮರೆತು ಹೋಗಿದೆ), ಎನ್ನಮ್ಮ ..... ದಶಮ ಗರ್ಭ ಸಂಜಾತನಿರ್ಪೆ. ಈತ ವಿಶ್ವ, ಕಾಯಿಸಿಪ್ಪೆಯಲ್ಲೇ ಹುಟ್ಟಿದವನು
ರಾಜ: ??
ಕಾಶಿ: ಕಾಶ್ಯಪ ಗೋತ್ರದವನು, ಕಾಯಿಸಿಪ್ಪೆಯಲ್ಲಿ ಹುಟ್ಟಿದವನು.
ವಿಶ್ವ: ಹೌದೌದು, ಎನ್ನ ಜನನ ಕಾಲದಲ್ಲಿ ಅವಘಡ ಒಂದು ಆಗಿರ್ಪುದು. ಎನ್ನಮ್ಮ ಎನ್ನ ಹೆತ್ತ ಹಸೆಯಲ್ಲಿಯೇ ಇಹ ಲೋಕವನ್ನು ತ್ಯಜಿಸಿ ಹೋಗಿರ್ಪಳು. ಅಷ್ಟು ಮಾತ್ರವಲ್ಲ, ಎನ್ನ ಹಿರಿಯ ಹೆಂಡತಿಯೊಬ್ಬಳು(???) ಓಡಿ ಹೋಗಿರ್ಪಳು.
ಇನ್ನೊಂದಷ್ಟು ಉಭಯ ಕುಶಲೋಪರಿ ನಡೆಸಿದ ಮೇಲೆ:
ಕಾಶಿ: ಇಂದು ನಾಳೆ ಎಂತದೋ ಹಬ್ಬ ಉಂಟಲ್ಲ
ವಿಶ್ವ: ಹಬ್ಬ ಹಬ್ಬ ರಂಜಾನ್!!
ಕಾಶಿ: ಸರಿ ಮಾಡಲು ಹೇಳದ ಶಬ್ದವನ್ನು ಹೇಳಿದರೆ ನಾನು ಹೇಗೆ ಸರಿ ಮಾಡಿ ಸಾಯಲಿ. ರಂಜನೀಯವಾಗಿರುವುದಂತೆ?
ರಾಜ: ಹೌದು, ಇಂದು ಧರ್ಮ ಸಂಕ್ರಾಂತಿ. ಗಾಯನ ನೃತ್ಯ ಭೋಜನ ಎಲ್ಲ ನಡೆಯುವುದು.
ಕಾಶಿ: ಧರ್ಮ ಸಂಕ್ರಾಂತಿಯ ಉತ್ಸವವನ್ನು ಧರ್ಮಕ್ಕೆ ನೋಡಿ ಹೋಗಲು ಬಂದವರು.
ರಾಜ: ಧರ್ಮಕ್ಕೇ ನೋಡಲು ಬಂದವರೋ?
ಕಾಶಿ: ಊರೂರು ತಿರುಗುವ ಎಮ್ಮಲ್ಲಿ ಕಾಸೆಲ್ಲಿ?
ರಾಜ: ನೋಡುವುದಕ್ಕೆ ಅವಕಾಶವುಂಟು, ಹೀಗೆ ಬನ್ನಿ..

ರಾಜ ಅವರನ್ನು ನೃತ್ಯ ನಡೆಯುವ ಸಭೆಯ ಬಳಿ ಕರೆದುಕೊಂಡು ಹೋಗುತ್ತಾನೆ.
ಕಾಶಿ, ವಿಶ್ವ: ಅಲ್ಲಾ, ಅಲ್ಲಾ, ಅಲ್ಲಾ...
ರಾಜ: ನೀವು ಯಾವ ಜಾತಿಯವರು?
ಕಾಶಿ: ನಾವು ಬ್ರಾಹ್ಮಣರೇ ಇರ್ಪೆವು.
ರಾಜ: ಇಲ್ಲಿ ನಡೆಯುತ್ತಿರುವೆದೆಲ್ಲಾ ಹೌದು, ಹಾಗಿರುವಾಗ ನೀವು ಅಲ್ಲಾ ಅನ್ನಲು ಕಾರಣ?
ಕಾಶಿ: ಅಲ್ಲಾ ಎನ್ನಲು ಕಾರಣ ಇರ್ಪುದಲ್ಲಾ(ಇರ್ಪುದು+ಅಲ್ಲಾ!)
ರಾಜ:??
ಕಾಶಿ: ನಾವು ಇಲ್ಲಿಗೆ ಬಂತಲ್ಲಾ, ಬಂದು ಇಲ್ಲಿ ನಿಂತೆವಲ್ಲಾ..
ಕಾಶಿ: ಇಲ್ಲಿ ಕಟ್ಟಿರುವ ಜಾಲರಿಯೇನ್, ಜೋಲರಿಯೇನ್.. ಗಾಯಕರೇನ್, ವಾದಕರೇನ್ , ಬಾಧಕರೇನ್(??).. ಇದೆಲ್ಲ ನೋಡಿದ ನಮಗೆ ಇದೇನು ಇಂದ್ರಲೋಕವೋ, ಚಂದ್ರಲೋಕವೋ, ಯಮಲೋಕವೋ(??), ಶನಿಲೋಕವೋ(??)..
ರಾಜ: ಎಲ್ಲ ಲೋಕದ ದರ್ಶನವೂ ಆಯಿತೋ?
ಕಾಶಿ: ಹ್ಮ್.., ಅದೆಲ್ಲ ಅಲ್ಲಾ!! ಅಲ್ಲಾ ಎನ್ನಲು ಇಷ್ಟುದ್ದ ಕಾರಣವಿರ್ಪುದು!!

ನಂತರ Title song..
ಅದ್ಭುತ ಗಾಯನ.
ಸಂಕ್ರಾಂತೀಈಈಈಈ..... ಹೆಚ್ಚು ಕಮ್ಮಿ ಮೂರು ನಿಮಿಷ ಇದೆ ರೀತಿ ಆಲಾಪನೆ ಮಾಡುವುದು ಸಾಮಾನ್ಯದ ಮಾತಲ್ಲ.
ಇದು ಧರ್ಮ ಸಂಕ್ರಾಂತಿ.
ಶುಭದ ಧರ್ಮ ಸಂಕ್ರಾಂತಿ ..

ವಿಧಿಯ ನೆಲೆಗಟ್ಟು, ವಿಧಿಯ ಚೌಕಟ್ಟು
ವಿಧಿಯೇ ಧರ್ಮದ ಒಳ ಗುಟ್ಟು..

ಧರ್ಮದ ಹಣತೆಗೆ ಧರ್ಮದ ತೈಲವಿಕ್ಕಿ
ಧರ್ಮದ ಜ್ಯೋತಿಯ ಬೆಳಗೋಣ..

ಕೆಟ್ಟದ್ದ ನೋಡಬೇಡ, ಕೆಟ್ಟದ್ದ ಕೇಳಬೇಡ
ಕೆಟ್ಟದ್ದನ್ನೆಂದೂ ಮಾಡಬೇಡವೋ, ನೀ ಕೆಟ್ಟದ್ದನ್ನೆಂದೂ ಮಾಡಬೇಡವೋ..
ತಾನಿ ತಂದಾನ ತಾನಿ ತಂದನಾನ, ತಂದಾನೆ ತಂದನಾನಿ ತಂದನಾನೋ..

ಈ ಹಾಡು ಮುಗಿದ ಮೇಲೆ ಕಾಶಿ ಹಾಗೂ ವಿಶ್ವ ರಾಜಕುಮಾರಿಯನ್ನು ಭೇಟಿ ಮಾಡುತ್ತಾರೆ.
ನೆನಪಿನಲ್ಲಿರುವ ಒಂದಷ್ಟು ಮಾತುಗಳು:
ರಾಜಕುಮಾರಿ: ಹೇಗಿತ್ತು ಗಾಯನ?
ಕಾಶಿ: ತಾನಿ ತಂದಾನ, ತಂದ ತಾನೇ ತಿಂದಾನ..
ರಾಜಕುಮಾರಿ: ನಿಲ್ಲಿಸಿ, ಏನದು?
ವಿಶ್ವ: ಅವ ಹೇಳಿದ್ದರಲ್ಲಿ ತಪ್ಪೇನು? ತಾನು ತಂದದ್ದನ್ನು ತಾನು ತಿನ್ನದೇ ಇನ್ಯಾರು ತಿನ್ನುತಾನೆ? !!
ರಾಜಕುಮಾರಿ: ಹಾಗಲ್ಲ ಅದು, ತಂದಾನ ತಾನಿ ತಂದಾನ ಅಂತ. ಒಂದು ಬಗೆಯ ತಿಲ್ಲಾನ. ಹಾಡು ಹೇಗನಿಸಿತು?
ಕಾಶಿ: ಕೆಟ್ಟದ್ದ ನೋಡಬೇಡ, ಕೆಟ್ಟದ್ದ ಕೇಳಬೇಡ
ವಿಶ್ವ: ಕೆಟ್ಟದ್ದನ್ನೆಂದೂ ಆಡಬೇಡವೋ, ನೀ ಆಡಬೇಡವೋ.. ಯಾರಿಗೆ ಹೇಳಿದ ಮಾತು ಇದು?
ರಾಜಕುಮಾರಿ: ನಿಮಗೆ ಹೇಳಿದ್ದು.
ಕಾಶಿ: ನಾವೇನು ಕೆಟ್ಟದ್ದ ಮಾಡಿದ್ದೇವೆ?
ವಿಶ್ವ: ಒಮ್ಮೆ ಮಾಡಿದ್ದರೂ ಅದನ್ನು ನೋಡಿದವರು ಯಾರು?
ರಾಜಕುಮಾರಿ: ಹಾಗಲ್ಲ, ಅದು ಸರ್ವರಿಗೂ ಹೇಳಿದ ಮಾತು.
ವಿಶ್ವ: ಸರ್ವೇಯರಿಗೆ ಹೇಳಿದ ಮಾತೋ?
ಕಾಶಿ: ಇಲ್ಲ ಪಟೇಲರಿಗೆ ಹೇಳಿದ್ದು, ಸುಮ್ಮನಿರು

ಇನ್ನೂ ಒಂದಷ್ಟು ಹಾಸ್ಯಭರಿತ ಸಂಭಾಷಣೆಯ ನಂತರ ಏನೋ ಪಿತೂರಿ ಮಾಡಿ ರಾಜಕುಮಾರಿಯನ್ನು ಅಪಹರಿಸಿ ತಮ್ಮ ರಾಜನ ಬಳಿಗೆ ಕರೆದೊಯ್ಯುತ್ತಾರೆ. ಆಗ ಬರುವ ಹಾಡು:
ಪ್ಯಾರಿ ಬಾರೆ ಬಳಿಗೆ..
ಪ್ಯಾರೀ.. ಪ್ಯಾರೀ..
ಪ್ಯಾರಿ ಬಾರೆ ಬಳಿಗೆ........
ಈ ಹಾಡು ಹಾಡುವಾಗ ಅದ್ಭುತ variations in pitch. ಕೇಳಿಯೇ ಅನುಭವಿಸಬೇಕು.

ಆಗ ನಮ್ಮ hero ಪ್ರತ್ಯಕ್ಷ! ಅವನು ಅವಳನ್ನು ರಕ್ಷಿಸಿದ ಮೇಲೆ ಮತ್ತೊಂದು ಹಾಡಿದೆ!
ಹಾಗೆ ನೋಡಿದರೆ ಯಕ್ಷಗಾನದಲ್ಲಿ ಎಲ್ಲಾ ಸನ್ನಿವೇಶಕ್ಕೂ ಒಂದೊಂದು ಹಾಡಿದೆ!!
ಕಥೆ ಮುಂದುವರಿಯುತ್ತದೆ!

ಇರುವ ಮೂರು ಭಾಗಗಳಲ್ಲಿ ಎರಡನೇ ಭಾಗದ ಕ್ಯಾಸೆಟ್ ಮಾತ್ರ ಸರಿ ಇದ್ದ ಕಾರಣ ಅದರ ಹಾಡುಗಳು/ಮಾತುಗಳು ನೆನಪಿವೆ.

ಉಳಿದದ್ದು ನೆನಪಾದರೆ ಇನ್ನೊಂದು ದಿನ ಬರೆಯುತ್ತೇನೆ. ನೀವೂ ಯಕ್ಷಗಾನ ಸಿಕ್ಕಿದರೆ ನೋಡುತ್ತೀರಲ್ಲಾ?

Sunday, March 22, 2009

ಇನ್ನೊಂದು ಭಯಾನಕ ರಾತ್ರಿ!

ಅಬ್ಬಾ...
ಆ ರಾತ್ರಿಯನ್ನು ನೆನೆಸಿಕೊಂಡರೆ.. ಈಗಲೂ ಮೈ ಜುಮ್ಮೆನ್ನುತ್ತದೆ. ಆಗ ನಾನು ಮೈಸೂರಿನಲ್ಲಿದ್ದೆ. ಕಾಲೇಜು ಹಾಸ್ಟೆಲಿನಲ್ಲಿ ನಮ್ಮ ರೂಮಿನಲ್ಲಿ ಮೂರು ಜನ. ಯಾವಾಗಲೂ ಕಿರಿಚಾಡೋದು, ಜಗಳ ಮಾಡೋದು, ರಾತ್ರಿ ರಾತ್ರಿಯವೆರೆಗೆ ಸಿನಿಮಾ ನೋಡೋದು ಇದೆಲ್ಲ ಇದ್ದಿದ್ದೇ.

ಅವತ್ತು ಮಳೆ ಜೋರಾಗಿ ಬರುತ್ತಿತ್ತು, ಮಿಂಚು ಗುಡುಗು ಬೇರೆ. ನಮ್ಮ ಹಾಸ್ಟೆಲಿನಲ್ಲಿ earthing ಸರಿಯಾಗಿಲ್ಲದ ಕಾರಣ ಮಿಂಚು/ಗುಡುಗು ಬಂದ ತಕ್ಷಣ ಎಲ್ಲಾ computer ಹಾಗೂ ಹಾಲಿನಲ್ಲಿದ್ದ TV ಗೆ ವಿಶ್ರಾಂತಿ ಸಿಗುತ್ತದೆ. Internals ಹತ್ತಿರದಲ್ಲಿ ಇಲ್ಲದ ಕಾರಣ ಯಾರೂ ಓದುತ್ತಿರಲಿಲ್ಲ. ಬೇರೆ ಮಾಡಲು ಏನೂ ಇಲ್ಲದ ಕಾರಣ ಎಲ್ಲರೂ ಬೇಗ ಮಲಗಿದ್ದೆವು.

ಸರಿ, ನಿದ್ದೆಯೇನೋ ಬಂತು. ಆಮೇಲೆ ನಡೆದದ್ದು, ಅಬ್ಬಾ...
ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಕಿಟಕಿ ತೆಗೆದಿಟ್ಟರೆ ತಂಪು ಗಾಳಿ ಬರುತ್ತದೆ ಎಂದು ಒಂದು ಕಿಟಕಿ ತೆಗೆದೆ ಮಲಗಿದ್ದೆವು. ಜೋರಾಗಿ ಗುಡುಗಿದಾಗ ನನಗೆ ಎಚ್ಚರವಾಯಿತು. ಅವರಿಬ್ಬರಿಗೂ ಎಚ್ಚರವಾಯಿತೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆಗ ಸಮಯ ನೋಡಿದರೆ ಸುಮಾರು 2.30. ಇನ್ನೇನು ನಿದ್ದೆ ಬರಬೇಕು ಮತ್ತೊಂದು ಗುಡುಗು. ಮತ್ತೂ ಒಂದಷ್ಟು ಹೊತ್ತು ಸುಮ್ಮನೆ ಹೊರಳಾಡುತ್ತಿದ್ದೆ. ಇಂಥಾ ಸಮಯದಲ್ಲಿ ಯಾವಾಗಲೂ ಕರೆಂಟ್ ಕೈ ಕೊಡುತ್ತದೆ, ಅವತ್ತೂ ಕೂಡ ಹಾಗೇ ಆಯಿತು.

ಆಮೇಲೆ ಇನ್ನೇನೋ ವಿಚಿತ್ರವಾದ ಶಬ್ದ ಕೇಳಲು ಶುರುವಾಯಿತು. ಇಂಥಾ ಶಬ್ದಗಳು ನನಗೆ ಮಾತ್ರವೇ ಯಾಕೆ ಕೇಳುತ್ತವೆ, ಅದೂ ಗೊತ್ತಿಲ್ಲ. ಯಾರೋ ಹತ್ತಿರದಲ್ಲೇ ನಡೆದಾಡಿದಂತೆ, ಯಾವುದೋ iron rod ಎಳೆದಾಡಿದಂತೆ ಕೇಳಿಸುತ್ತಿತ್ತು. ಮಧ್ಯ ಮಧ್ಯದಲ್ಲಿ ಜೋರಾಗಿ ಗುಡುಗು ಬೇರೆ.

ಮುಸುಕು ತೆಗೆದು, ರೂಮ್ ಮೇಟ್ ಗಳನ್ನು ಕೂಗಲೂ ಭಯ. ಇನ್ನೇನು ಮಾಡುವುದು, ದೇವರನ್ನೇ ನೆನೆಯುತ್ತಾ ಹಾಗೆ ಮಲಗಿದ್ದೆ. ಅಷ್ಟು ತಂಪಾದ ಗಾಳಿ ಬೀಸುತ್ತಿದ್ದರೂ ನಾನು ಬೆವರಿ ಮುದ್ದೆಯಾಗಿದ್ದೆ. ನಿಧಾನವಾಗಿ ಸದ್ದು ಕೇಳುವುದು ಕಡಿಮೆಯಾಯಿತು. ಆದರೂ ರಾತ್ರಿಯೆಲ್ಲಾ ನಿದ್ದೆ ಬರಲೇ ಇಲ್ಲ. ಬೆಳಗ್ಗೆ 6 ಗಂಟೆ ಹೊತ್ತಿಗೆ ಹಾಗೂ ಹೀಗೂ ನಿದ್ದೆ ಬಂತು.

ಆದರೂ ೮ ಗಂಟೆಯೊಳಗೆ ಏಳಲೇ ಬೇಕು. ಕಾಲೇಜಿಗೆ ಹೋಗುವುದು ಬೇಡವೇ. ಬೆಳಗ್ಗೆ 7.30 ಹಾಗೆ ಎದ್ದಾಯಿತು. ಆದರೂ ಯಾರ ಹತ್ತಿರವೂ ಏನೂ ಹೇಳಲಿಲ್ಲ. ಎಲ್ಲಿ ಎಲ್ಲವೂ ನನ್ನ ಕಲ್ಪನೆಯೋ/ಕನಸೋ ಎಂಬ ಭಯ.

ಆಮೇಲೆ ಸ್ನಾನ ಎಲ್ಲಾ ಆದ ಮೇಲೆ ತಿಂಡಿ ತಿನ್ನಲು mess ಕಡೆಗೆ ಹೋದೆವು. ದಿನವೂ ಅಲ್ಲಿ ಹೋಗಿ ತಿಂಡಿ ತಿನ್ನುವ ಮೊದಲು ಕೈ/ತಟ್ಟೆ ತೊಳೆಯುವುದು ಮೊದಲಿನಿಂದಲೇ ಬಂದಿರುವ ಒಳ್ಳೆಯ ಅಭ್ಯಾಸ. ಅಲ್ಲಿಗೆ ಹೋಗಿ ನೋಡಿದರೆ ಅಲ್ಲಿನ steel tapಗಳು ಮಾಯ!
ಆಗ ಗೊತ್ತಾಯಿತು ರಾತ್ರಿ ನಡೆದದ್ದು ಏನು ಅಂತ!!!!

Mess ಇನ್ನೂ ಸಂಪೂರ್ಣವಾಗಿ construction ಆಗಿರಲಿಲ್ಲ. ಅದರ ಕಿಟಕಿಯನ್ನು ಯಾರು ಬೇಕಾದರೂ ಹೊರಗಿನಿಂದ ತೆಗೆಯಬಹುದಿತ್ತು! ನಮ್ಮ ರೂಮಿನ ಕಿಟಕಿಯಿಂದ messನಲ್ಲಿ ಏನಾಗುತ್ತಿದೆ ಎನ್ನುವುದನ್ನು ಆರಾಮಾಗಿ ನೋಡಬಹುದು. ಯಾರೋ ಕಳ್ಳರು ರಾತ್ರಿಯೇ ಬಂದು ಎಲ್ಲಾ tagಗಳನ್ನೂ ಕದ್ದಿದ್ದರು! ರೂಮಿನ ಕಿಟಕಿ ತೆರೆದೇ ಇದ್ದ ಕಾರಣ ಶಬ್ದ ಜೋರಾಗಿ ಕೇಳಿದೆ!

ಛೆ, ನಾನು ಸ್ವಲ್ಪ ಧೈರ್ಯ ಮಾಡಿದ್ದರೆ ಒಂದು ಕಳ್ಳತನವನ್ನು ತಪ್ಪಿಸಬಹುದಿತ್ತು. ಆದರೂ ನನಗಿರುವ ಒಂದೇ ಒಂದು ಅನುಮಾನ, ನಾವೆಲ್ಲಾ ಮಲಗಿದ್ದರೂ ನಮ್ಮ ಹಾಸ್ಟೆಲಿಗೆ ಗಸ್ತು ತಿರುಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಈ ಶಬ್ದ ಯಾಕೆ ಕೇಳಲಿಲ್ಲ?

Thursday, March 5, 2009

ಬೆಕ್ಕಿಗೇನು ಚಿಂತೆ?ವರುಣ್ ತೆಗೆದ ಫೋಟೊ, ಅವನ ಅನುಮತಿ ಇಲ್ಲದೆ ಹಾಕುತ್ತಿದ್ದೇನೆ!
ಈ ಬೆಕ್ಕಿಗೆ ಏನು ಆಲೋಚನೆ ಇರಬಹುದು ಎನ್ನುವುದೇ ನನಗೆ ಚಿಂತೆಯಾಗಿದೆ!!
ಇದಕ್ಕೆ ಹಾಲಿಗೆ ಕೊರತೆ ಉಂಟಾಗಿರಬಹುದಾ, ಇಲ್ಲಾ ಮನೆಯೊಡತಿ ಹಾಕುವ ಅನ್ನ ಕಡಿಮೆ ಮಾಡಿರಬಹುದಾ?
ಮನೆಯಲ್ಲಿ ಇಲಿಗಳ ಸಂಖ್ಯೆ ಕಡಿಮೆಯಾಗಿರಬಹುದಾ ಅಥವಾ ಮನೆಯೊಡೆಯ ಇನ್ನೊಂದು ಬೆಕ್ಕನ್ನು ಸಾಕಲು ತಂದಿರಬಹುದಾ?
ಇದಕ್ಕೇನು ಆರ್ಥಿಕ ಹಿಂಜರಿತದಿಂದಾಗ ಮನೆ ನಡೆಸಲು ಕಷ್ಟವಾಗಿದೆಯಾ?
ಮನೆಯವರ ಮೇಲೆ ಸಿಟ್ಟು ಮಾಡಿ ಟೂ ಬಿಟ್ಟಿರಬಹುದಾ?
ಬೆಳಗ್ಗೆ ಹೊರಗಡೆ ಹೋದ ಮನೆಯವರಿಗಾಗಿ ದಾರಿ ಕಾಯುತ್ತಿರಬಹುದಾ?
ಆಟ ಆಡಲು ಹೋದ ಮಕ್ಕಳನ್ನು(ಮರಿ ಬೆಕ್ಕುಗಳು) ದೂರದಿಂದಲೇ ನೋಡುತ್ತಿರಬಹುದಾ?
ಇಲ್ಲಾ ಬಾಲ ಹೇಳಿದ ಹಾಗೆ ಸೂರ್ಯ ನಮಸ್ಕಾರ ಮಾಡುತ್ತಿರಬಹುದಾ?
ಇಂದ್ರ ಪದವಿಗಾಗಿ ತಪಸ್ಸು ಮಾಡುತ್ತಿದೆಯಾ? ಯೋಗ, ಧ್ಯಾನದಲ್ಲಿ ನಿರತವಾಗಿದೆಯಾ?
ಏನಾಗಿರಬಹುದು?ಏನಾದರೆ ನಿನಗೇನು?
ನಿನ್ನ ಕೆಲಸ ನೀನು ನೋಡಿಕೋ, ನನ್ನ ತಂಟೆಗೆ ಬರಬೇಡ ಅನ್ನುವ ಹಾಗೆ ನೋಡುತ್ತಿದೆ ಮುಂದಿನ ಫೋಟೋದಲ್ಲಿ!