Sunday, February 15, 2009

ಹಾಡು ಹಳೆಯದಾದರೇನು..

ಹಳೆಯ ಹಾಡುಗಳನ್ನು ಕೇಳಿದರೆ ಹಾಡುಗಾರರಿಂದ ಹೆಚ್ಚು ನಟ/ನಟಿಯರೇ ಕಣ್ಣ ಮುಂದೆ ಕಾಣಿಸುತ್ತಿದ್ದರು.
ಒಂದಷ್ಟು ಉದಾಹರಣಗಳು:
"ಮೇರೇ ನೈನಾ ಸಾವನ್.." ಅಂತ ಹಾಡು ಕೇಳಿದಾಗ ಮೊದಲು ರಾಜೇಶ್ ಖನ್ನಾ, ನಂತರ ಕಿಶೋರ್ ಕುಮಾರ್ ತಾನೇ ಕಾಣಿಸುವುದು.
"ಕಿ ಪಘ್ ಘುಂಗರೂ ಬಾಂದ್, ಮೀರಾ ನಾಚೀ ಥೀ.." ಅಂತ ಹಾಡಿದ್ದು ಅದೇ ಕಿಶೋರ್ ಕುಮಾರ್, ಆದರೆ ಕಣ್ಣಿಗೆ ಕಾಣಿಸುವುದು ಅಮಿತಾಭ್ ಬಚ್ಚನ್ ಅಲ್ವಾ?
"ತಾರೀಫ್ ಕರೂಂ ಕ್ಯಾ ಉಸ್ ಕೀ.." ಅಂದರೆ ಮೊಹಮ್ಮದ್ ರಫೀಗಿಂತ ಹೆಚ್ಚು ಶಮ್ಮೀ ಕಪೂರ್ ಕಾಣಿಸುತ್ತಾರೆ ಅಲ್ವಾ?
"ಕಭೀ ಕಭೀ ಮೇರೇ ದಿಲ್ ಮೇ.." ಅಂತ ಅಂದ್ರೆ ಅಮಿತಾಭ್ ಬಚ್ಚನಾ ಇಲ್ಲಾ ಮುಕೇಶಾ ನೀವೇ ಹೇಳಿ?
"ಪಿಯಾ ತೂ ಅಬ್ ತೊ ಆಜಾ.." ಇದು ಆಶಾ ಭೋಸ್ಲೆನಾ ಇಲ್ಲಾ ಹೆಲೆನ್ಆ?

ಆದರೆ ಈಗ ಹಾಡುಗಳನ್ನು ಕೇಳಿ:
"ಅನಿಸುತಿದೆ ಯಾಕೋ ಇಂದು.." ಹಾಡು ಕೇಳಿದರೆ ಬರೀ ಸೋನು ನಿಗಮ್ ಕಾಣಿಸುತ್ತಾರೆ, ಗಣೇಶ್ ಅಂತ ಗೊತ್ತಾಗೋದು ಸಿನೆಮಾ ನೋಡಿದ ಮೇಲೇನೇ.
"ದಿಲ್ ಯೆ ದಿಲ್, ದೀವಾನಾ.." ಇದು ಶಾರುಖ್ ಖಾನ್ ಗೋಸ್ಕರ ಹಾಡಿದ್ದು ಅಂತ ನನಗೆ ಯಾವತ್ತೂ ಅನಿಸಲಿಲ್ಲ, ಹಾಡನ್ನು ಕಲ್ಪಿಸಲು ಹೊರಟರೆ ಬರೀ ಸೋನು ನಿಗಮ್ ಕಾಣಿಸುತ್ತಾರೆ.
"ಓ ಮಿತ್ವಾ, ಸುನ್ ಮಿತ್ವಾ.." ಇದು ಉದಿತ್ ನಾರಾಯಣ್ ತಾನೇ? ಅಮೀರ್ ಖಾನ್ ಕಾಣಿಸುತ್ತಾರಾ?
"ಆಮೀ ಝೇ ತುಮಾರೋ.." ಅಂದರೆ ಶ್ರೇಯಾ ಘೋಶಾಲ್ ಬಿಟ್ಟು ವಿದ್ಯಾ ಬಾಲನ್ ಕಲ್ಪಿಸುವುದು ನನಗಂತೂ ಸಾಧ್ಯವಿಲ್ಲ.

ಈಗಿನ ಹಾಡುಗಳೂ ಚೆನ್ನಾಗಿವೆ, ಆದರೆ ಮೊದಲು ನಟ/ನಟಿಯರಿಗೋಸ್ಕರ ಹಾಡುತ್ತಿದ್ದರು, ಈಗಿನವರು ಬರೀ ತಮಗಾಗಿ ಹಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತದೆ! ನಿಮಗೆ?

Sunday, February 8, 2009

ಭಯಾನಕ ರಾತ್ರಿ

ಅವತ್ತು ನಾನು ರೂಮಿನಲ್ಲೇ ಒಬ್ಬಳೇ ಇದ್ದೆ. ಆಗಷ್ಟೆ ಘಂಟೆ ೧೨ ಕಳೆದಿತ್ತು.
ಹೊರಗಡೆ ನಾಯಿಗಳು ಏನನ್ನೋ ನೋಡಿ ಬೊಗಳುತ್ತಿದ್ದವು, ಬೀದಿಯಲ್ಲಿದ್ದ ಎಲ್ಲಾ ನಾಯಿಗಳೂ ಸೇರಿದ್ದವು ಎನ್ನುವಷ್ಟು ಜೋರಾಗಿ ಅವು ಬೊಗಳುವುದು ಕೇಳಿಸುತ್ತಿತ್ತು.
ರೂಮಿನಲ್ಲಿ ಯಾವುದೋ ಪ್ಲಾಸ್ಟಿಕ್ ಚೀಲವನ್ನು ಯಾರೋ ಆ ಕಡೆ ಈ ಕಡೆ ಎಳೆದಾಡುತ್ತಿದ್ದಾರೆ ಅನ್ನುವ ಹಾಗೆ, ಮೇಲ್ಗಡೆ ಯಾರೋ ನಡೆದಾಡುತ್ತಿದ್ದಾರೆ ಅನ್ನುವ ಹಾಗೆ, ಹೊರಗಡೆ ಯಾರೋ ಚೀರಿದ ಹಾಗೆ, ಇನ್ನೂ ಏನೇನೋ ಶಬ್ದಗಳು..

ನಾನು ಮೊದಲೇ ಅಂಜುಬುರುಕಿ, ಹೇಗೋ ಧೈರ್ಯ ಮಾಡಿ ರೂಮಿನಲ್ಲಿದ್ದ ಚಿಕ್ಕ bulb ಒಂದನ್ನು on ಮಾಡಿ ಮುಸುಕು ಹಾಕಿ ಮಲಗಿದೆ.
ಬೆಳಕಿದ್ದ ಕಾರಣ ಭಯ ಕಡಿಮೆ ಆಗಿತ್ತು. ಸ್ವಲ್ಪ ನಿದ್ದೆ ಬಂತು ಅಂದಾಗ ಯಾರೋ ರೂಮಿನ ಬಾಗಿಲನ್ನು ತೆಗೆದರು, ದಡ್ ಅನ್ನುವ ದೊಡ್ದ ಶಬ್ದ ಬೇರೆ! ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು.

ಅಷ್ಟರಲ್ಲಿ ದೀಪ ಆರಿಸಿದ ಸದ್ದು ಕೇಳಿಸಿತು, ಕಣ್ಣು ಬಿಟ್ಟರೆ ಎಲ್ಲಾ ಕತ್ತಲು. ಆಮೇಲೆ ಏನೂ ಸದ್ದಿಲ್ಲ. ದೀಪ ಆರಿಸಿದ ಸದ್ದೇ ಕೊನೆಯದು. ತುಂಬು ಮೌನ(pin drop silence ಅಂತಾರಲ್ಲ ಹಾಗೇ). ಇನ್ನೇನು ಮಾಡೋದು ಗೊತ್ತಾಗ್ತಿಲ್ಲ. ಎದ್ದು ನೋಡಲೂ ಭಯ, ಮಲಗಿರಲೂ ಆಗುತ್ತಿಲ್ಲ.

ಅಷ್ಟೋ ಇಷ್ಟೋ ಧೈರ್ಯ ಮಾಡಿ, ಮೊಬೈಲ್ ನಲ್ಲಿದ್ದ torch on ಮಾಡಿ ನೋಡಿದೆ, ರೂಮಿನಲ್ಲಿ ಯಾರೂ ಕಾಣಿಸುತ್ತಿಲ್ಲ. ಮುಂದೇನು ಮಾಡುವುದು? ಈ ಶಬ್ದಗಳು ನನಗೆ ಮಾತ್ರ ಕೇಳಿದ್ದೋ ಅನ್ನುವುದನ್ನ ಖಚಿತ ಪಡಿಸಿಕೊಳ್ಳಬೇಕಿತ್ತು. ಸರಿ ಅಂತ ಹೊರಗೆ ಮಲಗಿದ್ದ ನನ್ನ ಗೆಳತಿಗೆ ಮಲಗಿದಲ್ಲಿಂದಲೇ ಫೋನ್ ಮಾಡಿದೆ.

ಮುಂದೇನಾಯಿತು ಅಂತ ಯೋಚಿಸುತ್ತಿದ್ದೀರಾ? ಅವಳು ತಾನೇ ಬಲ್ಬ್ on ಮಾಡಿ off ಮಾಡಲು ಮರೆತೆ ಅಂದುಕೊಂಡು ಬಂದು off ಮಾಡಿ ಹೋಗಿದ್ದಳಂತೆ!!!! ಹೋದ ಜೀವ ಮತ್ತೆ ಬಂತು. ನನ್ನ ಸ್ತಿಥಿ ನೋಡಿ ನನಗೇ ನಗು ಬಂತು.
ಮತ್ತೆ ಮಲಗಿ ನಿದ್ದೆ ಮಾಡಿದೆ :-)
ಈಗ ದಿನಾ ಮಲಗುವ ಮುಂಚೆ ಅವಳಿಗೆ light off ಮಾಡಬೇಡ ಅಂತ ಹೇಳುವುದನ್ನು ಮಾತ್ರ ಮರೆಯುವುದಿಲ್ಲ.

Sunday, February 1, 2009

ಯೆ ಹೈ.. ವಿವಿಧ್ ಭಾರತಿ..

ಮೈಸೂರಿನಲ್ಲಿ ಇದ್ದಾಗ ಗಣಕಯಂತ್ರ ಕೆಟ್ಟಿದ್ದಾಗ ನನ್ನ ರೂಮ್ ಮೇಟ್ ಮೊಬೈಲ್ ಫೋನೇ ನಮಗೆ ಹಾಡು ಕೇಳುವ ಸಾಧನ!
ಅದೂ ಅದರಲ್ಲಿ mp3 player ಇರಲಿಲ್ಲ, ಬೆಂಗಳೂರಿನಲ್ಲಿ ಇರುವಂತೆ ಹತ್ತಾರು F.M. channel ಗಳೂ ಇರಲಿಲ್ಲ, ಬರೀ ಆಕಾಶವಾಣಿ ಮೈಸೂರು. ಅದರಲ್ಲಿ ಬೆಳಗ್ಗೆ 10 ರಿಂದ 11 ರವರೆಗೆ ಬರುವ ತಮ್ ನಮ್ ಕನ್ನಡ ಚಿತ್ರಗೀತೆಗಳು ಹಾಗೂ 11 ರಿಂದ 12 ರವರೆಗೆ ಬರುವ ಝನಕ್ ಝನಕ್(ಕಾರ್ಯಕ್ರಮದ ಹೆಸರು ಸರಿಯಾಗಿ ನೆನಪಿಲ್ಲ) ಹಿಂದೀ ಚಿತ್ರಗೀತೆಗಳೇ ನಮಗೆ entertainment package!

ಆದರೆ ನನಗೆ ಮಧ್ಯಾಹ್ನ ವಿವಿಧ ಭಾರತಿ ಸಹಪ್ರಸಾರದಲ್ಲಿ ಬರುತ್ತಿದ್ದ ಮೇರೀ ಸಹೇಲೀ ಹಾಗೂ ಇನ್ನೂ ಕೆಲವು ಕಾರ್ಯಕ್ರಮಗಳು ಹೆಚ್ಚು ಇಷ್ಟವಾಗಿದ್ದವು. ಈಗ ಮತ್ತೆ ವಿವಿಧ್ ಭಾರತಿ(102.9) ಕೇಳುತ್ತಿದ್ದೇನೆ, ಅದು ಬಿಟ್ಟರೆ FM Rainbow(101.3). ಕನ್ನಡ ಹಾಗೂ ಹಿಂದಿಯಲ್ಲಿ ನಾವು ಹೆಚ್ಚು-ಕಡಿಮೆ ಮರೆತೇ ಬಿಟ್ಟಿರುವಂತ ಹಾಡುಗಳೆಲ್ಲ ಹಾಕುತ್ತಾರೆ. ಅದರಲ್ಲಿ ಪ್ರಸಾರವಾಗುವ ಜಾಹೀರಾತುಗಳು ತುಂಬಾ ತಮಾಷೆಯಾಗಿರುತ್ತವೆ, ಅದರಲ್ಲಿ ಬರುವ ಸಂವಾದಗಳು ಇನ್ನೂ ಮಜ! :-)
ಇತ್ತೀಚೆಗೆ ನಡೆದ ಕೆಲವು ಸಂಗತಿಗಳು:

ವಿಷಯ 1:
ವಿಷಯ: ಇಂದಿನ ಯುವಜನತೆಯಲ್ಲಿ ಮೌಲ್ಯಗಳು ಇವೆಯೇ?
ಒಬ್ಬ ವ್ಯಕ್ತಿ call ಮಾಡಿ ಇಂದಿನ ಯುವಜನತೆಯಲ್ಲಿ ಮೌಲ್ಯಗಳು ಇಲ್ಲ, ಎಲ್ಲಾ ಬರೀ ಪಬ್, ಕ್ಲಬ್ ಅಂತ ಓಡಾಡುತ್ತಾರೆ, ಹೀಗೇ ಇನ್ನೂ ಏನೇನೋ ಹೇಳಿ ಕೊನೆಗೆ ಇನ್ನು ಯಾವ ಹಾಡು ಪ್ರಸಾರ ಮಾಡುತ್ತೀರಾ ಅಂತ ಕೇಳಿದ್ರು. ಅದಕ್ಕೆ host ಇನ್ನು ಮಿಲನ ಚಿತ್ರದ ನಿನ್ನಿಂದಲೇ ಹಾಡನ್ನು ಹಾಕುತ್ತೇವೆ ಎಂದಿದ್ದಕ್ಕೆ, ಅದು ಬೇಡ, ನಮಗೆ ಅನಾಥ ಮಗುವಾದೆ ಹಾದು ಇಷ್ಟ, ಅದನ್ನೇ ಹಾಕಿ ಎನ್ನಬೇಕೆ! ಪಾಪ host ಇಲ್ಲ, ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಸಮಯ ಮುಗಿದು ಹೋಯಿತು. ಒಂದಷ್ಟು ಹಾಡುಗಳನ್ನು ಮೊದಲೇ ಆಯ್ಕೆ ಮಾಡಿರುತ್ತೇವೆ. ಅದನ್ನೇ ಹಾಕುತ್ತೇವೆ ಅಂತ ಹೇಳಿ phone ಇಟ್ಟು ನಿನ್ನಿಂದಲೇ ಹಾಡನ್ನು ಪ್ರಸಾರ ಮಾಡಿದರು!

ವಿಷಯ 2:
ಬಸವ ಭವನದಲ್ಲಿ ನಡೆದ KSIC vintage saaree collection & exhibition ಅಲ್ಲಿ ಒಬ್ಬರು ನೇರವಾಗಿ ಅಲ್ಲಿ ನಡೆಯುತ್ತಿರುವುದನ್ನೆಲ್ಲಾ ಹೇಳುತ್ತಿದ್ದರು. ಸುಮಾರು ಒಂದು ವಾರ ಬರೀ ಸೀರೆಗಳದ್ದೇ ಮಾತು!! ಪಾಪ ಅವರಿಗೆ ಬೇರೆ ಇನ್ನೇನೂ ಸಿಗಲಿಲ್ಲ ಅನ್ಸತ್ತೆ! ಅದರಲ್ಲಿ ತುಂಬಾ ಚೆನ್ನಾಗಿ ತೆಗೆದಿಟ್ಟ ಅತ್ಯಂತ ಹಳೆಯ ಸೀರೆಗಳಿಗೆ ಬಹುಮಾನ ಬೇರೆ ಇತ್ತು. 1948ರಲ್ಲಿ ಖರೀದಿಸಿದ ಸೀರೆಗೆ ಮೊದಲ ಬಹುಮಾನ ಬಂತು. 50 ವರ್ಷ ಹಳೆಯದಾದ ಸೀರೆ! ಆರ್ಯಾಂಬ ಪಟ್ಟಾಭಿಯವರಿಗೆ ಈ ಬಹುಮಾನ ಬಂದಿತ್ತು. ಅವರನ್ನು ಮಾತನಾಡಿಸುವಾಗ ಸೀರೆಯನ್ನು ಬಿಟ್ಟು ಅವರ ಕಾದಂಬರಿಗಳು, ಕಪ್ಪು-ಬಿಳುಪು ಸಿನೆಮಾದ ಬಗ್ಗೆಯೇ ಹೆಚ್ಚು ಮಾತನಾಡಿದ್ದರು! KSIC ಸೀರೆಗಳ ಬಗ್ಗೆ ನಡೆಯಬೇಕಿದ್ದ ಕಾರ್ಯಕ್ರಮ ಮತ್ತೆಲ್ಲೋ! ರೇಡಿಯೋದಲ್ಲಿ ಈ ತರ ಆಗುವುದು ಸಹಜ ಎನ್ನುತ್ತೀರಾ?

ವಿಷಯ 3:
ಆದಿತ್ಯವಾರ ಬೆಳಗ್ಗೆ ವಿವಿಧ ಭಾರತಿ ಕೇಳಬೇಕು, ದಿನದ ಆರಂಭವೇ ಶೋಕಗೀತೆಗಳಿಂದ!! ಬೆಳಗ್ಗೆ ಎದ್ದ ಕೂಡಲೇ "ದುನಿಯಾ ಬನಾನೇವಾಲೇ" ಅಥವಾ "ಈ ದೇಹದಿಂದ ದೂರನಾದೆ" ಅಂತ ಹಾಡು ಕೇಳಿದರೆ ದಿನ ಹೇಗಿರಬೇಕು? ಹಾಗೇ ಸಂಜೆ ಹೊತ್ತಲ್ಲಿ ಬರುವ ಜಯಮಾಲ ಕಾರ್ಯಕ್ರಮದಲ್ಲೂ ಹೆಚ್ಚಾಗಿ ಶೋಕಗೀತೆಗಳು ಬರುತ್ತವೆ. ಇದು ಸೈನಿಕರ ಮೆಚ್ಚಿನ ಹಾಡುಗಳ ಕಾರ್ಯಕ್ರಮ. ಅವರು ಬರೀ ಶೋಕಗೀತೆಗಳನ್ನೇ ಕೇಳುತ್ತಾರಾ?

ನನಗೆ ಆದರೂ ಉಳಿದ F.M. stationಗಳಿಗಿಂತ ವಿವಿಧಭಾರತಿಯೇ ಹೆಚ್ಚು ಇಷ್ಟ. ನಾನು ಕೇಳದೇ ಇದ್ದಂತಹ ಅನೇಕ ಹಳೆ ಹಾಡುಗಳನ್ನು ಪರಿಚಯಿಸಿ ಕೊಟ್ಟಿದೆ, ಸಿಹಿ ಸಿಹಿ ಹಾಡುಗಳನ್ನೂ ಪ್ರಸಾರ ಮಾಡುತ್ತದೆ. ಸಂಜೆ ನಾನು ಏಕಾಂಗಿಯಾಗಿ ಸಮಯ ಕಳೆಯುವಾಗ ನನ್ನ ಸಂಗಾತಿ-ವಿವಿಧ ಭಾರತಿ(ಈ ರೀತಿ ಪ್ರಾಸಬದ್ಧವಾಗಿ ಮಾತನಾಡುವುದನ್ನೂ ಅಲ್ಲಿಂದಲೇ ಕಲಿತಿರುವೆ!) ಎಂದರೆ ತಪ್ಪಾಗಲಾಗದು.
ನೀವೂ ಕೇಳಿ-ಅಭಿಪ್ರಾಯ ಹೇಳಿ(ಮತ್ತೆ ಪ್ರಾಸ!! :-P)!