Saturday, January 3, 2009

ಬೆಂಗಳೂರಿನಲ್ಲಿ ತಿರುಗಾಟ

ಅಮ್ಮ ಬೆಂಗಳೂರಿಗೆ ಬಂದು ನಮ್ಮನೇಲಿ(ನಾವು ೪ ಜನ ಗೆಳತಿಯರು ಆಪಾರ್ಟ್‌ಮೆಂಟಲ್ಲಿ ಬಾಡಿಗೆ ಮನೇಲಿ ಇದ್ದೀವಿ) ನಾಲಕ್ ದಿನ ಇರ್ತೀನಿ ಅಂದಾಗ ಆಕಾಶಕ್ಕೇ ಹಾರ್ ಬಿಡೋಣ ಅನ್ನೋವಷ್ಟು ಸಂತೋಷ ಆಯ್ತು. ನಾನು ಊರಿಗೆ ಹೋಗಿದ್ದಾಗ ಅಮ್ಮ ಮತ್ತೆ ವರುಣ್ ನನ್ ಜೊತೇಲೇ ಬೆಂಗಳೂರಿಗೆ ಬಂದ್ರು. ಅಮ್ಮಂಗೆ ಎಲ್ಲಾ ನೆಂಟರ ಮನೆಗೆ ಹೋಗ್‌ಬೇಕಾಗಿದ್ರೆ ವರುಣ್ ಗೆ ಬೆಂಗಳೂರು ನೋಡ್ಬೇಕು ಅಂತ.
ಸರಿ ಅಂತ ನಾನು ಚಿಕ್ಕಮ್ಮನ್ ಮನೆ, ಮಾವನ್ ಮನೆ, ಕಾರ್ತಿಕ್ ಮನೆ ಇಷ್ಟ್ ಮನೆಗೆ ಹೋಗೋಣ. ಆಮೇಲೆ ಲಾಲ್ ಬಾಗ್, ಕಬ್ಬನ್ ಪಾರ್ಕ್, ಬನ್ನೇರ್ಘಟ್ಟ ಮೃಗಾಲಯ, ವಿಧಾನ ಸೌಧ ಇಷ್ಟೆಲ್ಲಾ ನೋಡೋಣ ಅಂತ ಯೋಚ್ನೆ ಮಾಡ್ದೆ.

ದಿನ ೧: ಆದಿತ್ಯ ವಾರ(28 December 2008)
ಬೆಳಗ್ಗೆ ಗೋಧಿ ದೋಸೆ(ನಾನೇ ಮಾಡಿದ್ದು!) ತಿಂದು ಹೊರಟ್ವಿ. ಊಟಕ್ಕೆ ಎನ್.ಆರ್.ಕಾಲೊನೀ ಲಿದ್ದ ಚಿಕ್ಕಮ್ಮನ್ ಮನೆಗ್ ಹೋದ್ವಿ.
ಅಲ್ಲಿಂದ ಬಸವನ ಗುಡಿ ದೇವಸ್ಥಾನಕ್ಕೆ ಹೋದೆವು. ದೊಡ್ ಬಸವಣ್ಣನ ದರ್ಶನ ಮಾಡಿ ಸ್ವಲ್ಪ ಹೊತ್ತು ಅಲ್ಲೇ ಕಳೆದ್ವಿ.ಹಂಗೆ ಅಲ್ಲೇ ಹತ್ರದಲ್ಲಿ ಇದ್ದ ಕೃಷ್ಣನ ದೇವಸ್ಥಾನ(ಗೋವರ್ಧನ ದೇವಸ್ಥಾನ) ನೋಡಿದ್ವಿ. ಗುಹಾ ದೇವಾಲಯ ತುಂಬಾ ಚೆನ್ನಾಗಿ ಕಟ್ಟಿದಾರೆ. ಒಳಗಡೆ ನೋಡಿದ್ರೆ ಕೃಷ್ಣ ಕಿರು ಬೆರಳಲ್ಲಿ ಇಡೀ ದೇವಸ್ಥಾನಾನೆ(ಕಲ್ಲಲ್ ಕಟ್ಟಿರೋದು) ಎತ್ತಿ ಹಿಡಿಡಿರೋ ಥರ ಇದೆ.


ಆಮೇಲೆ ಲಾಲ್‌ಬಾಗ್ ನೋಡಕ್ ಹೋದ್ವಿ. ಅಷ್ಟೊಂದ್ ಹೂವುಗಳೂ ಇರ್ಲಿಲ್ಲ. ಆದಿತ್ಯಾವಾರ ಆಗಿದ್ರಿಂದ ತುಂಬಾ ಜನ. ಇಡೀ ನೋಡಕ್ ಆಗ್ಲಿಲ್ಲ. ಗಾಜಿನ ಮನೆ ಹಾಗೂ ಕೊಳ ನೋಡ್ಕೊಂಡು ಹೊರಗಡೆ ಬಂದ್ವಿ. ಸುಮ್ನೇ ನಡ್ದು ನಡ್ದು ಸುಸ್ತಾಯ್ತು!ಅಲ್ಲಿಂದ ವಿದ್ಯಾರಣ್ಯಾಪುರಮ್ ಕಡೆ ನಮ್ ಸವಾರಿ ಹೊರಡ್ತು! ಇಲ್ಲಿ ತನಕ ಆಟೋದವ್ರ ಹತ್ರ ಜಗಳ ಆಡಿ ಸಾಕಾಗಿತ್ತು. ಅದಕ್ಕೆ ನಗರ ಸಾರಿಗೆ ಬಸ್ಸುಗಳಲ್ಲಿ ಆರಾಮಾಗಿ ಹೋದ್ವಿ! ಅಲ್ಲಿಗ್ ಹೋದ್ರೆ ಮಾವನ್ ಮನೇಲಿ(ಸೋದರ ಮಾವನ ಮನೆ, ಬೇರೆ ಅಂತ ತಪ್ಪಾಗಿ ಭಾವಿಸಬಾರದಾಗಿ ವಿನಂತಿ) ಗಡದ್ದಾಗಿ ಊಟ, ಸೂಪರ್ ಆಗಿ ನಿದ್ದೆ!!

ದಿನ ೨: ಸೋಮವಾರ(29th December 2008)
ಬೆಳಗ್ಗೆ ಎದ್ದು ತಿಂಡಿ(ಚಪಾತಿ) ತಿಂದು ಹೆಬ್ಬಾಳದಲ್ಲಿರೋ ಕಾರ್ತಿಕ್(my someone special) ಮನೆಗ್ ಹೋದ್ವಿ. ಅಮ್ಮ ಅವ್ನನ್ನ ನೋಡಿರ್ಲಿಲ್ಲ, ಹಾಗೇ ಅವ್ನ್ ಅಪ್ಪ ಅಮ್ಮನ್ನೂ ಪರಿಚಯ ಮಾಡ್ಬೇಕು ಅಂತ ಅಲ್ಲಿಗ್ ಹೋಗೋ ಪ್ಲಾನು ಮಾಡಿದ್ದು. ಅಲ್ಲಿಗ್ ಹೋದ್ ಕೂಡ್ಲೇ, ತಿಂಡಿ ತಿನ್ನಿ ಅಂತ ಒತ್ತಾಯ ಮಾಡಿ ದೋಸೆ ಹಾಕ್ ಕೊಟ್ರು(ಎರಡನೇ ಬಾರಿ ಉಪಹಾರ!). ಅದೇ ಆಪಾರ್ಟ್‌ಮೆಂಟಲ್ಲಿ ಕಾರ್ತಿಕ್ ಅಕ್ಕನ ಮನೆ ಇತ್ತು, ಅಲ್ಲಿಗ್ ಹೋದ್ರೆ ಮತ್ತೆ ಕಾಫಿ ಮಾಡಿದ್ರು. ಅಷ್ಟೇ ಸಾಲ್ದು ಅಂತ ಅದೇ ಆಪಾರ್ಟ್‌ಮೆಂಟಲ್ಲಿ ಅಕ್ಕನ ನೆಂಟರ ಮನೆ ಇನ್ನೊಂದಿತ್ತು, ಆವ್ರು ಒರಿಸ್ಸಾದವರು. ಮಾನೆಗ್ ಕರ್ಕೊಂಡ್ ಹೋಗಿ ಮತ್ತೆ ಕಾಫಿ, ಇನ್ನೂ ಒರಿಸ್ಸಾದ ಸಿಹಿ ತಿಂಡಿಗಳನ್ನು ತಂದು ನಮ್ ಮುಂದೆ ಇಟ್ರು. ಅದನ್ನ ತಿಂದಾಗ ಹೊಟ್ಟೆ ಇನ್ನೆರಡು ದಿನ ನಂಗೇನೂ ಬೇಡ ಅಂತ ಮುಷ್ಕರ ಶುರು ಮಾಡಿತ್ತು!
ಆಮೇಲೆ ಊಟಾನೂ ಅಲ್ಲೇ ಮಾಡಿ, ನಕ್ಷತ್ರಾಲಯ(planetarium) ನೋಡೋಣ ಅಂತ ಹೋದ್ರೆ ಸೋಮವಾರ ರಜಾ ದಿನ ಅನ್ನೋ ಬೋರ್ಡು! ಸರಿ, ಅಲ್ಲೇ ಮುಂದೆ ಸಂಗೀತ ಕಾರಂಜಿ ನೋಡೋಣ ಅಂತ ರಸ್ತೆ ದಾಟಿದ್ರೆ ಅದಕ್ಕೂ ಸೋಮವಾರ ರಜೆ! ಆಮೇಲೆ ಅಲ್ಲಿಂದ forum ಕಡೆ ಬರ್ತಾ, ಕಬ್ಬನ್ ಪಾರ್ಕ್, ವಿಧಾನ ಸೌಧ ಎಲ್ಲಾ ಹೊರಗಡೆಯಿಂದ ನೋಡಿದ್ವಿ. Museum ನೋಡೋಣ ಅಂತ ಒಂದ್ ಸರ್ತಿ ಯೋಚ್ನೆ ಮಾಡಿದ್ವಿ, ಆದ್ರೆ ಅದಕ್ಕೂ ಸೋಮವಾರಾನೇ ರಜೆ ಅಂತೆ! ಅದಕ್ಕೆ forum ನೋಡಕ್ ಬಂದ್ವಿ. ಅಲ್ಲಿ ಕ್ರಿಸ್ಮಸ್ ಗಲಾಟೆ!

Forum ಎಲ್ಲಾ ನೋಡಿದ್ ಮೇಲೆ ಅಮ್ಮನ್ನ ಮನೇಲಿ ಬಿಟ್ ಬಂದ್ವಿ. ನಂತ್ರ ಶುರುವಾಯ್ತು laptop ಹುಡುಕಾಟ!
ಒಂದೊಂದೇ ನೊಡ್ತಾ ಹೋದ್ರೆ, ಪ್ರತಿಯೊಂದೂ ಮುಂಚೀನದಕ್ಕಿಂತ ಚೆನ್ನಾಗ್ ಕಾಣಿಸತ್ತೆ. ಕೊನೆಗೂ ವರುಣ್ acer 5920 ತೆಗೊಳ್ಳೋದು ಅಂತ ನಿರ್ಧಾರ ಮಾಡ್ದ. ಆದ್ರೆ ಮನೇಲಿ ಒಂದ್ ಸರ್ತಿ ಕೇಳಿ ನಾಳೆನೇ ತೆಗೊಳ್ಳೋದು ಅಂತ ಮಾತಾಯ್ತು. ಸರಿ ಇನ್ನೇನು, ಮನೇಗ್ ಹೋಗಿ ಅನ್ನ, ಸಾರು ಮತ್ತು ಬೀಟ್ ರೂಟ್ ಪಲ್ಯ ಮಾಡಿ ತಿಂದು ಮಲಕ್ಕೊಂಡ್ವಿ.

ದಿನ ೩: ಮಂಗಳವಾರ(30th December)
ಎದ್ದಾಗ ನಾವು ಅಂದ್ಕೊಂಡಿದ್ದು, ಬನ್ನೇರ್ಘಟ್ಟಕ್ಕೆ ಹೋಗಿ ದಿನ ಎಲ್ಲಾ ಅಲ್ಲೇ ಕಳೆಯೋದು, ಸಂಜೆ laptop ಖರೀದಿ ಮಾಡಿ ಹುಬ್ಬಳ್ಳಿ ಬಸ್ ಹಿಡಿಯೋದು ಅಂತ. ನಮ್ ಆಫೀಸ್ ಹೆಂಗೀದ್ರೂ ದಾರೀಲೇ ಬರತ್ತಲ್ವಾ ಅಂತ ಅಮ್ಮನ್ನೂ, ವರುಣ್ ಅನ್ನೂ ಆಫೀಸ್ ಗೆ ಕರ್ಕೊಂಡ್ ಹೋದೆ.
ಆಮೇಲೆ ಬನ್ನೇರ್ಘಟ್ಟ ಬಸ್ ಹತ್ಟಿದ್ ಕೂಡ್ಲೇ ಬಸ್ ಕಂಡಕ್ಟರ್ ಅಂದ್ರು "ಇವತ್ತು national park ಗೆ ರಜಾಮ್ಮ. ಇಲ್ಲೇ ಹತ್ರ ಮೀನಕ್ಷಿ ಸುಂದರೇಶ್ವರ temple ಇದೆ. ಬಸ್ ಹತ್ಟಿದೀರಾ, temple ಆದ್ರೂ ನೋಡ್ಕೊಂಡ್ ಹೋಗಿ. ಸರಿ ಅಂತ ದೇವಸ್ಥಾನಕ್ ಹೋದ್ವಿ. ದೊಡ್ಡ ದೇವಸ್ಥಾನ. ಇನ್ನೂ ಪೂರ್ತಿಯಾಗಿಲ್ಲ. ಆದ್ ಮೇಲೆ ನೋಡಕ್ ಚೆನ್ನಾಗಿರತ್ತೆ ಅನ್ಸತ್ತೆ.
ಆಮೇಲೆ ಇನ್ನೇನ್ ಮಾಡೋದು ಅಂತ ಯೋಚ್ನೆ ಮಾಡ್ತಾ ಇದ್ದಾಗ museum ಕಡೇನೆ ಹೋಗಾಣ ಅಂತ ಅಂದ್ಕೊಂಡ್ ಹೊರಟ್ವಿ. ಕಾರ್ಪೋರಶನ್ ಅಲ್ಲಿ ಇಳ್ದು ಆಟೋದವರತ್ರ ಬರ್ತೀರಾ ಅಂತ ಕೇಳಿದ್ರೆ ಯಾರೂ ಬರ್ಲಿಲ್ಲ! ಇನ್ನೇನ್ ಮಾಡಕ್ಕಾಗತ್ತೆ, 1.5 ಕಿ.ಮೀ.ನಡ್ಕೊಂಡ್ ಹೋದ್ವಿ!
museum is really amazing. ನಿಜ್ವಾಗ್ಲೂ ತುಂಬಾ ತುಂಬಾ ಚೆನ್ನಾಗಿದೆ. ಚೆನ್ನಾಗೇ maintain ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ವಿಜ್ಞಾನದ ಪರಿಕಲ್ಪನೆಗಳನ್ನ(concepts) ಅರ್ಥ ಮಾಡ್ಕೊಳ್ಳಕ್ಕೆ ಒಳ್ಳೇ ಜಾಗ. ಆದ್ರೆ ಎಲ್ಲರೂ ಪ್ರತಿಯೊಂದೂ switch ಅನ್ನ ಅಮುಕಿ ಅಮುಕಿ ಹಾಳ್ ಮಾಡ್ತಿದಾರೆ. ಒಂದಷ್ಟು ಜನ ಅಲ್ಲೇ ಇದ್ದು ಎಲ್ಲಾನೂ ವಿವರಿಸಿ ಹೇಳೋ ಹಾಗಿದ್ರೆ ಇನ್ನೂ ಚೆನ್ನಾಗಿರ್ತಿತ್ತು. ಹೆಚ್ಚಿನ ಎಲ್ಲಾ ತರದ ಯಂತ್ರಗಳು ಹೇಗೆ ಕೆಲ್ಸಾ ಮಾಡತ್ವೆ ಅನ್ನೋದನ್ನ ಇಲ್ಲಿ ನೋಡ್ಬಹುದು. ಇನ್ನೊಂದಿನ ಇಡೀ ದಿನ ಅಲ್ಲೇ ಇರೋ ಹಾಗೆ ಹೋಗಿ ಎಲ್ಲವನ್ನ ಸರಿಯಾಗಿ ನೋಡ್ಬೆಕು. museum terrace ಇಂದ ವಿಜಯ್ ಮಲ್ಯ ಅವರ U.B. city ನೋಡಿದ್ರೆ ಎಲ್ಲೋ ಅಮೇರಿಕಕ್ಕೆ ಬಂದಿದೀವೇನೋ ಅಂತ ಅನಿಸ್ತಿತ್ತು.

ಆಮೇಲೆ ಅಲ್ಲಿಂದ ಹೊರಟು ಮತ್ತೆ ಕೋರಮಂಗಲಕ್ಕೆ ಬರೋವಾಗ ರಾತ್ರಿ 7 ಆಗಿತ್ತು. ವರುಣ್ laptop ಖರೀದಿ ಮಾಡಿ ಮನೆ ತಲುಪುವಾಗ 8. ಬೇಗ ಬೇಗ ಹೊರಟು majestic ಬಂದಾಗ 9.30 ಆಗಿತ್ತು. ಅಲ್ಲಿ ಕಾಮತ್ ಹೋಟ್ಲಲ್ಲಿ ಊಟ ಮಾಡಿ 11 ಕ್ಕೆ ಹುಬ್ಬಳ್ಳಿ ಬಸ್ ಹತ್ತಿದ್ ಕೂಡ್ಲೇ ನಿದ್ದೆ.

ಇಲ್ಲಿಗೆ ದಿನದ ಅಮ್ಮನ ಬೆಂಗಳೂರು ಸವಾರಿ ಮುಗಿದಿತ್ತು. ಹಾಗೆ ನನ್ನ ಹುಬ್ಬಳ್ಳಿ trip ಶುರುವಾಯ್ತು :-).

3 comments:

ಸಿಮೆಂಟು ಮರಳಿನ ಮಧ್ಯೆ said...

ನಿಮ್ಮ ಬರವಣಿಗೆ ಚೆನ್ನಾಗಿದೆ...

ಅಭಿನಂದನೆಗಳು...

ಉಮಿ :) said...

ಚೆನ್ನಾಗಿದೆ ನಿಮ್ಮ ಬೆಂಗಳೂರು ವಿಹಾರದ ವಿವರಣೆ. ನಮ್ಮ ಅಪ್ಪ ಅಮ್ಮ ಮೊದಲ ಸಾರಿ ಬೆಂಗಳೂರಿಗೆ ಬಂದಾಗ ಬಲು ಹುರುಪಿನಿಂದ ಬೆಂಗಳೂರು ತೋರಿಸಿದ್ದೂ ನೆನಪಾಯ್ತು. ನೀವೂ ಹುಬ್ಬಳ್ಳಿಯವರು ಅಂತ ತಿಳಿದು ಇನ್ನೂ ಖುಷಿಯಾಯ್ತು. ಹುಬ್ಬಳ್ಳಿ ಭಾಷೆ ಮರೆತು ಬಿಟ್ಟಿದ್ದೀರ ಅಥವಾ ನೆನಪಿದೆಯಾ :)

Anonymous said...

ಉಮಿಯವರೇ,
ನೀವು ಬಂದಿದ್ದು ಖುಷಿಯಾಯಿತು :-)
ನಾನು ಮಂಗಳೂರು ಕದೆಯವಳು, ಅಲ್ಲೇ ಹತ್ತಿರ ಪುತ್ತೂರು ಎಂಬುದು ನನ್ನ ಊರು.
ನನ್ನ ಅಣ್ಣ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಮನೆ ಈಗ ಅಲ್ಲೇ.
ಹುಬ್ಬಳ್ಳಿ ಭಾಷೆ ಚೆನ್ನಾಗಿದೆ. ಅತ್ತಿಗೆ ಕೃಪೆಯಿಂದಾಗಿ ಸ್ವಲ್ಪ ಸ್ವಲ್ಪ ಕಲಿತಿದ್ದೇನೆ! :-)
ಹೀಗೇ ಬರುತ್ತಾ ಇರಿ.