Tuesday, October 6, 2009

ಮುಗುಳ್ನಗೆ

ಇನ್ನೊಂದಷ್ಟು ವಿಡಿಯೋಗಳು, ನಿಮ್ಮ ನಗುವಿಗಾಗಿ. ನಿಮ್ಮ ಅಭಿಪ್ರಾಯ ತಿಳಿಸಿ.
ಮೊದಲ ರಾತ್ರಿ?! http://www.youtube.com/watch?v=lZIVnIYYDPA
ಸತ್ಯದ ಜೊತೆ ಮುಖಾಮುಖಿ ಭಾಗ1: http://www.youtube.com/watch?v=80NzYBXena0
ಸತ್ಯದ ಜೊತೆ ಮುಖಾಮುಖಿ ಭಾಗ2: http://www.youtube.com/watch?v=WBrnqjf40HA

Sunday, July 19, 2009

ಬೆಂಗಳೂರಲ್ಲಿ ಎರಡು ವರ್ಷ!

ಹುಟ್ಟಿದ್ದರಿಂದ ಹಿಡಿದು ಪಿ.ಯು.ಸಿ. ವರೆಗೂ ಮನೆ ಬಿಟ್ಟು ಎಲ್ಲೂ ಹೋಗದ ನಾನು, ಮೈಸೂರಲ್ಲಿ ೪, ಬೆಂಗಳೂರಲ್ಲಿ ೨ ವರ್ಷ ಕಳೆದೆ ಎಂದರೆ ನನಗೆ ಆಶ್ಚರ್ಯ! ಮೈಸೂರಲ್ಲಿ ಇಂಜಿನಿಯರಿಂಗ್ ಓದಲು ಹೋದಾಗ ಅಷ್ಟೇನೂ ಅಳುಕಿರಲಿಲ್ಲ, ಅಣ್ಣನೂ ಮೈಸೂರಲ್ಲೇ ಇದ್ದುದು ಒಂದು ಕಾರಣ! ಆದರೆ ಬೆಂಗಳೂರಿಗೆ ಬರುವಾಗ ಸ್ವಲ್ಪ ಭಯ, ಈ ಬೆಂಗಳೂರಿನ ವೇಗಕ್ಕೆ ಹೊಂದಿಕೊಳ್ಳುತ್ತೇನೋ ಇಲ್ಲವೋ ಎಂಬ ಯೋಚನೆ ಇತ್ತು.

ಬೆಂಗಳೂರಿಗೆ ಬಂದಾಗ ಕಂಪನಿ ಕಡೆಯಿಂದ ಮಾರತ್ ಹಳ್ಳಿಯಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ೧೫ ದಿನಗಳ ಕಾಲ ಉಳಿಯುವ ಅವಕಾಶ ಕೊಟ್ಟಿದ್ದರು, ಅಷ್ಟು ದಿನಗಳ ಒಳಗೆ ನಮ್ಮ ಠಿಕಾಣಿ ನಾವೇ ಹುಡುಕ ಬೇಕಾಗಿತ್ತು. ನಾನು ಹಾಗೂ ನನ್ನ ಗೆಳತಿಯರು ಬಿ.ಟಿ.ಎಂ. ಹಾಗೂ ಕೋರಮಂಗಲದಲ್ಲಿ ಪಿ.ಜಿ. ಹುಡುಕಲು ಶುರು ಮಾಡಿದೆವು. ಎರಡು ದಿನ ಹುಡುಕಾಡಿ ಅಂತೂ ಇಂತೂ ರಾಷ್ಟೀಯ ಕ್ರೀಡಾ ಗ್ರಾಮದಲ್ಲಿ(national games village: NGV) ಒಂದು ಪಿ.ಜಿ.ಯಲ್ಲಿ ಉಳಿಯುವುದಾಗಿ ನಿರ್ಧಾರ ಮಾಡಿ ಎರಡು ಮೂರು ದಿನಗಳೊಳಗೆ ಅಲ್ಲಿಗೆ ಸಾಮಾನು ಸರಂಜಾಮುಗಳನ್ನು ಸಾಗಿಸಿದೆವು! ಅಪ್ಪ ಅಮ್ಮ ಇಲ್ಲದೆ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಅಂತ ನನಗೆ ಖಂಡಿತವಾಗಿಯೂ ಗೊತ್ತಿರಲಿಲ್ಲ!

ಪಿ.ಜಿ. ಯಲ್ಲಿ ಒಂದು ವರ್ಷ ಇದ್ದಾಗ ಎಂತೆಂತಾ ಹುಡುಗಿಯರ ಜೊತೆ ಇದ್ದೆ ಅಂತ ಈಗ ಯೋಚನೆ ಮಾಡಿದರೆ ಹೌದಾ, ನಾನು ಇದ್ದದ್ದು ನಿಜವಾ ಅಂತ ಈಗ ಅನಿಸುತ್ತದೆ! ಆ ಮೂರು ತಮಿಳು ಹುಡುಗಿಯರು, ಮಧ್ಯ ರಾತ್ರಿ ತನಕ ಏನೇನೋ ಹರಟೆ ಹೊಡೆಯುತ್ತಿದ್ದದ್ದು, ಆರು ಜನ ಉತ್ತರ ಭಾರತದವರು ಎಲ್ಲವರಲ್ಲೂ, ಎಲ್ಲದರಲ್ಲೂ ತಪ್ಪು ಹುಡುಕುತ್ತಿದ್ದದ್ದು, ಇನ್ನೊಂದು OCD(Obsessive–compulsive disorder) ಇದ್ದ ಹುಡುಗಿ, ಹೀಗೆ ನಮೂನೆವಾರು ಜನ! ಆದರೆ ಇವರಲ್ಲದೆ ಒಂದಷ್ಟು ಒಳ್ಳೆ ಹುಡುಗಿಯರೂ ಸ್ವಲ್ಪ ಸ್ವಲ್ಪ ಸಮಯ ಇದ್ದು ಉಳಿದವರ/ಪಿ.ಜಿ. ಮಾಲೀಕರ ಕಾಟ ತಡೆಯಲಾಗದೆ ಓಡಿ ಹೋದವರೂ ಇದ್ದರು! ಊಟ ತಿಂಡಿಯ ವಿಷಯಕ್ಕೆ ಬಂದರೆ ಒಂದು ವರ್ಷ ಹೆಚ್ಚು ಕಮ್ಮಿ ಎಲ್ಲ ದಿನ ಬೆಳಗ್ಗೆ ಪರಾಟ, ಮೂರು ಸರ್ತಿ ಅಡಿಗೆವರು ಬದಲಾದರೂ ಕೂಡ. ಊರಲ್ಲಿ, ಮೈಸೂರಲ್ಲಿ ಏನೂ ತಿನ್ನದೇ ಇದ್ದವಳು ಇಲ್ಲಿ ಏನು ಕೊಟ್ಟರೂ ತಿನ್ನುತ್ತಿದ್ದೆ! ಮೊದಲಿನ ಮಾಲೀಕರು ತಂಗಳು/ಹಳಸಿದ್ದು ತಂದು ಕೊಟ್ಟರೆ ನಂತರದಲ್ಲಿ ಒಂದು ತಮಿಳು ಹೆಂಗಸು ಬಂದು ಅಡಿಗೆ ಮಾಡುತ್ತಿದ್ದರು. ಆಮೇಲೆ ಬಂದ ಬೆಂಗಾಲಿ ಅಡಿಗೆಯಲ್ಲಿ ಯಾವುದೇ ತರಕಾರಿ ಮಾಡಿದರೂ ಆಲೂಗಡ್ಡೆ ಹಾಕದೆ ಇರುತ್ತಿರಲ್ಲಿ. ಇದೇ ನಾನು ಊದಿಕೊಳ್ಳಲು ಮುಖ್ಯ ಕಾರಣ ಇರಬೇಕು.

ಅಲ್ಲಿ ಒಂದು ವರ್ಷ ಇದ್ದು, ಇನ್ನು ಇಲ್ಲಿ ಇರಲು ಸಾಧ್ಯವಿಲ್ಲ ಅಂತ ಅನಿಸಿದ ಮೇಲೆ ೪ ಗೆಳತಿಯರ ಜೊತೆ ಕೋರಮಂಗಲದಲ್ಲಿ ಮನೆ ಬಾಡಿಗೆ ತೆಗೆದುಕೊಂಡೆವು. ಅಲ್ಲಿಂದ ಮುಂದೆ ಅಡಿಗೆಯಲ್ಲಿ ನನ್ನ ಪ್ರಯೋಗಗಳು ಶುರು, ನನ್ನ ಗೆಳತಿಯರೇ ಬಲಿ ಪಶುಗಳು!! ಅನ್ನ ಕೂಡಾ ಇಡಲು ಬಾರದ ಹುಡುಗಿ ಈಗ ಅನ್ನ/ಸಾರು/ಪಲ್ಯ ಇತ್ಯಾದಿ ಎಲ್ಲವನ್ನೂ ಚೆನ್ನಾಗಿ( ನಂಬಿಕೆ ಬಾರದಿದ್ದರೆ ನನ್ನ ಗೆಳತಿಯರನ್ನೇ ಕೇಳಿ ನೋಡಿ) ಮಾಡಲು ಕಲಿತದ್ದೂ ಆಶ್ಚರ್ಯದ ವಿಷಯ!

ಮನೆ ಬಿಟ್ಟರೆ ಶಾಲೆ, ಬಿಟ್ಟರೆ ಮನೆ, ಇಷ್ಟೇ ನನ್ನ ಪ್ರಪಂಚ ಆಗಿತ್ತು. ಸರಿಯಾಗಿ ಬಸ್ ಹಿಡಿದು ಅಜ್ಜಿ ಮನೆಗೆ ಒಬ್ಬಳೇ ಹೋಗಲೂ ಭಯ! ಅಂತಾ ಹುಡುಗಿ ಬೆಂಗಳೂರಿನಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಓಡಾಡಲು ಕಲಿತಿದ್ದೇನೆ ಎಂದರೆ ನನ್ನ ಅಪ್ಪ ಅಮ್ಮನಿಗಂತೂ ನಂಬಲೂ ಆಗುತ್ತಿಲ್ಲ.

ಈ ಎರಡು ವರ್ಷಗಳಲ್ಲಿ ಬೆಂಗಳೂರು ತುಂಬಾ ವಿಷಯಗಳನ್ನು ಕಲಿಸಿದೆ. ಎಲ್ಲವನ್ನೂ ಕೊಟ್ಟ ಬೆಂಗಳೂರಿಗೆ ಒಂದು ತುಂಬು ಹೃದಯದ ನಮನ.

Saturday, May 16, 2009

ತಮಾಷೆಗಾಗಿ ಮಾತ್ರ!!

1: ಉದಯ ಟಿ.ವಿ. ಯ ಹೊಚ್ಚ ಹೊಸ ಕಾರ್ಯಕ್ರಮ! ನೋಡಿ, ಮಜಾ ಮಾಡಿ!
ಉದಯ ಟಿ.ವಿ. bad times!


2. ಸಾಯಿಕುಮಾರ್ ಅರ್ಜುನ ಹಾಗೂ ರಾಜ್ ಕುಮಾರ್ ಬಬ್ರುವಾಹನ ಆಗಿದ್ದರೆ ಹೇಗಿರಬಹುದು? ನೋಡಿ ಸಾಯಿವಾಹನ

ಇವೆರಡೂ ನನ್ನ ಒಂದಷ್ಟು ಗೆಳೆಯರು ಸೇರಿ ಮಾಡಿದ್ದಾರೆ. ನಿಮ್ಮ ಅಭಿಪ್ರಾಯ ತಿಳಿಸಿ.

Monday, April 20, 2009

ಕಸವ್ ಗೆ ಯಾರು ಸರಿಯಾದ ವಕೀಲರು?

ಅಂಜಲಿ ವಾಘಮೊರೆಯವರನ್ನು ಕಸವ್ ನ ಅಧಿಕೃತ ವಕೀಲರನ್ನಾಗಿ ನೇಮಿಸಿದಾಗಲೂ ಅದು breaking news(ಒಡೆದು ಹಾಕುವ ಸುದ್ದಿ ಅಂತ ಹೇಳಬಹುದಾ?) ಆಗಿತ್ತು. ಹಾಗೆ ಅವರನ್ನು ತೆಗೆದು ಹಾಕಿದಾಗಲೂ ಮತ್ತೆ breaking news. ಮಧ್ಯಾಹ್ನ ಆಫೀಸಿನಲ್ಲಿ ಊಟ ಮಾದುತ್ತಿದ್ದಗೆ ಈ ಸುದ್ದಿಯನ್ನು ಟಿ.ವಿ. ಯಲ್ಲಿ ನೋಡಿ ಆಶ್ಚರ್ಯವಾಯಿತು. ಆಗ ನಾವು ಊಟದ ಮಧ್ಯೆ ಯಾರು ಕಸವ್ ಗೆ ತಕ್ಕ lawyer ಅಂತ ಮಾತನಾಡಲು ಶುರು ಮಾಡಿದೆವು.

ಚಿದಂಬರಂ ಆಗಬಹುದಾ? ಇವರು ನನಗೆ ಗೃಹ ಮಂತ್ರಿ ಸ್ಥಾನ ಸಾಕಾಯಿತು. I want to go back to my previous profession ಅಂತ ಏನಾದರೂ ಹೇಳಬಹುದಾ ಅಂತ ಯೋಚನೆ ಮಾಡಿದೆವು.

ಹೀಗೆ ಇನ್ನೂ ಅನೇಕರ ಬಗ್ಗೆ ಮಾತಾಡಿದರೂ ಕೊನೆಗೆ ಆಯ್ಕೆ ಆಗಿದ್ದು ಒಬ್ಬರೇ, ಅವರೇ ನಮ್ಮ ನಿಮ್ಮೆಲ್ಲರ ಮೆಚ್ಚಿನ ಟಿ.ಎನ್.ಸೀತಾರಂ. ಹೇಗೆ ಅಂತ ಯೋಚನೆ ಮಾಡ್ತಿದೀರಾ?

First point:
ಅಲ್ಲಿ ಗುಂಡುಗಳು ಹಾರಿದ್ದು ಎ.ಕೆ.47 ಇಂದ ಅಲ್ಲವೇ ಅಲ್ಲ. ಅದು ಬರೀ ಪೋಲೀಸರ ಗನ್ನುಗಳಿಂದ ಹೊರ ಬಂದ ಗುಂಡುಗಳು. ಇದಕ್ಕೆ ಪಕ್ಕಾ proof ಅಂತ ಗುಂಡು ಎಷ್ಟು ದೂರದಿಂದ ಹಾರಿತು, ಯಾವ ಗನ್ನು, ಇತ್ಯಾದಿ ಇತ್ಯಾದಿ ಮಾಹಿತಿ ಕೊಟ್ಟು ಕೊನೆಗೆ "ಬಸವರಾಜು, ಇದನ್ನ mark ಮಾಡಪ್ಪ" ಅಂತ ಹೇಳ್ತಾರೆ.

Next point:
ಇನ್ನು ಕಸವ್ ಎ.ಕೆ.47 ಹಿಡಿದುಕೊಂಡಿರುವ ವಿಡಿಯೋ ಚಿತ್ರಣ ಇದೆ. ಇದು ಹೇಗೆ ಸಾಧ್ಯ ಅಂತೀರಾ? ಪಾಪ ಕಸವ್ ಕೂಡ ಒತ್ತೆಯಾಳೇ, ಉಗ್ರವಾದಿ ಬೀಡಿ ಸೇದಕ್ಕೆ ಹೋದಾಗ ತನ್ನ ಕೈಯಲ್ಲಿದ್ದ ಬಂದೂಕನ್ನ ಪಾಪದ ಕಸವ್ ಕೈಯಲ್ಲಿ ಹಿಡಿಸಿದ್ದಾನೆ, ಅಷ್ಟೇ. ಅದನ್ನೇ ಈ ಮಾಧ್ಯಮಗಳು ದೊಡ್ಡದು ಮಾಡಿ...

Final point:
ಇಷ್ಟೂ ಸಾಲದಿದ್ದರೆ ಕಸವ್ ಮೊಬೈಲಿನ detailed bill ತರಿಸಿ ಅದರಲ್ಲಿ ಅವನು ಗುಂಡು ಹಾರುತ್ತಿದ್ದ ಸಮಯದಲ್ಲಿ ಸರಿಯಾಗಿ ಬೇರೆ ಯಾರದ್ದೋ ಜೊತೆ ಮಾತನಾಡುತ್ತಿದ್ದ, ಅವನು ಹೇಗೆ ಗುಂಡು ಹಾರಿಸುತ್ತಾನೆ ಅಂತ final point ಹೊಡೆದು, ಜೊತೆಗೆ ಇನ್ನೊಂದೆರಡು ವಚನಾನೋ, ಮಂಕುತಿಮ್ಮನ ಕಗ್ಗದ ಸಾಲುಗಳನ್ನೂ ಹೇಳಿ ಕೇಸು ಗೆಲ್ಲಿಸಿ ಕೊಡುತ್ತಿದ್ದರು.

ಇಷ್ಟೆಲ್ಲಾ ತಮಾಷೆಗೆ ಬರೆದೆ. ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಿದರೆ ಕಸವ್ ವಿರುಧ್ಧ ಇಷ್ಟೆಲ್ಲಾ ಸಾಕ್ಷಿ ಇದ್ದರೂ ಅವನಿಗೆ ಯಾಕೆ ಶಿಕ್ಷೆ ಕೊಡುತ್ತಿಲ್ಲ? ಅವನ ಮೇಲಿನ ಕೇಸು ವರ್ಷಗಟ್ಟಲೆ ಹೀಗೆ ನಡೆಯುತ್ತಿರುತ್ತದೆ. ಅದೇ ಅವನ ದೇಶದಲ್ಲಾಗಿದ್ದರೆ ಇಷ್ಟು ಸಮಯ ಅವನು ಜೀವಂತವಾಗಿರಲು ಸಾಧ್ಯವಿರಲಿಲ್ಲ. ನಮ್ಮ ಕಾನೂನು ವ್ಯವಸ್ಥೆ ಯಾಕೆ ಇಷ್ಟೊಂದು ನಿಧಾನ? ಈ ಪ್ರಶ್ನೆಗಳಿಗೆ ಉತ್ತರವೇ ಇಲ್ಲ ಎಂದೆನಿಸುತ್ತದೆ.

ನೋಡೋಣ ಅವನಿಗೆ ಇನ್ನೂ ಎಷ್ಟು ಜನ ವಕೀಲರು ಸಿಗುತ್ತಾರೆ, ಎಷ್ಟು ವರ್ಷ ಈ ಕೇಸು ನಡೆಯುತ್ತದೆ, ಕೊನೆಗೆ ಅವನು ಬಿಡುಗಡೆಯಾದರೂ ಆಶ್ಚರ್ಯವಿಲ್ಲ.

Thursday, April 9, 2009

ಬಲೇ, ಚಾ ಪರ್ಕ!

ಈರ್ ಬಲೆ ಚಾ ಪಾರ್ಕ ತೂತಾರ? ಸೋಕುತ ನಾಟಕ.

ಇದು ದೇವದಾಸ್ ಕಾಪಿಕಾಡ್ ಅವರು ನಿರ್ದೇಶಿರುವ ತುಳು ನಾಟಕ.
ಹೌದು, ಇದೊಂದು ತುಳು ನಾಟಕ, ಬರೀ ನಾಟಕ ಅಂತ ಹೇಳಿದರೆ ಸ್ವಲ್ಪ ಕಡಿಮೆಯೇ, ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಹಾಸ್ಯ ನಾಟಕ ಅಂತ ಹೇಳಿದರೆ ಸರಿ.

ಒಂದೆರಡು ಪಾತ್ರಗಳು:
ದಾಮು: ಅ.ದಾ.ಮ. (ಅಣ್ಣು, ದಾಮು, ಮಹಾಲಕ್ಷ್ಮಿ) ಕೆಫೆಯ ಮಾಲೀಕ
ಅಣ್ಣು: ದಾಮುವಿನ ಮಗ

ಒಂದಷ್ಟು ಪ್ರಸಂಗಗಳು:
ದಾಮು ಒಂದು ದಿನ ವಕೀಲರ ಮನೆಗೆ ಹೋಗಿರುತ್ತಾನೆ, ಅಣ್ಣು ಆಗ ಅವನನ್ನೇ ಹಿಂಬಾಲಿಸಿಕೊಂಡು ಬಂದು ದಾಮುವಿನಲ್ಲಿ ಕೇಳುವ ಪ್ರಶ್ನೆಗಳು-
ಗೋಳಿಬಜೆ ಮಲ್ಲ ಮಲ್ಪೊಡೆ?
ಕೊಡೆದ ಸಜ್ಜಿಗೆ ಇನಿತ ಸಜ್ಜಿಗೆಡು ಬೆರೆಸೋಡೇ??

ದಾಮು ಈ ರೀತಿ ಹೊರಗಡೆ ಎಲ್ಲಾದರೂ ಹೋದರೆ ಅಣ್ಣು ಹೋಟೆಲ್ ನೋಡಿಕೊಳ್ಳುವುದು.
ಅಣ್ಣು ಅಂದುಕೊಳ್ಳುವುದು ಒತ್ತಾರೆಡ್ತು ಒಂಜಿ ಗಿರಾಕಿಲಾ ಇಜ್ಜಿ, ಒಂಜಿ ಪರ್ನ್ದು ತಿಂಕ.

ದಾಮು ಬಂದ ಮೇಲೆ ಅವರ ನಡುವೆ ನಡೆಯುವ ಸಂಭಾಷಣೆ
ದಾಮು: ಏತು ಪರ್ನ್ದು ಪೋಂಡು?
ಅಣ್ಣು: ಪದಿಮೂಜಿ ಅಮ್ಮೆರೆ..
ದಾಮು: ಈ ಏತು ತಿಂತ?
ಅಣ್ಣು: ಒಂಜಿಯೇ ಅಮ್ಮೆರೆ
ದಾಮು: ಒಂಜಿಯ ರಡ್ಡಾ?
ಅಣ್ಣು: ಒಂಜಿಯೇ ಅಮ್ಮೆರೆ
ದಾಮು: ಒಂಜಿಯಾ ರಡ್ಡಾ?
ಅಣ್ಣು: ಒಂಜಿಯೇ ಅಮ್ಮೆರೆ, ಕಡೆ ಕಪ್ಪಾಯಿನ
ದಾಮು: ಕಡೆ ಕಪ್ಪಾಯಿನ ತಿನೋಡ್ಚಿ, ನಿಕ್ಕು ಏತು ಸರ್ತಿ ಪಣೋಡು, ಆಯೇನ ಪೂರಾ ಗಿರಾಕಿನಕಳೆಗು ಜಾಮ್ ಮಣ್ತದ ಕೊರ್ಕ!!

ಇನ್ನು ದಾಮುವಿಗೆ ಸಿಟ್ಟು ಬಂದರೆ,
ಅಣ್ಣು: ಒಂಜಿ ನೀರ್ ಗಮ್ಮಿ, ಪೇರ್ ಗಮ್ಮಿ, ಪೂರ ಗಮ್ಮಿ!!!
ದಾಮು: ಎಂಚಿನ?
ಅಣ್ಣು: ಚಾ ಅಮ್ಮೆರೆ
ದಾಮು:ಏರೆಗ್?
ಅಣ್ಣು: ಈರೆಗೆ ಅಮ್ಮೆರೆ..

ಇದೆಲ್ಲ ಓದಿದರೆ boring ಅನಿಸಬಹುದು, ಆದರೆ ಕೇಳಬೇಕು, ಆವಾಗ ಅದರ ಪೂರ್ತಿ ಮಜಾ ಬರುವುದು.

ಹಾಗೆ ಇನ್ನೊದು ನಾಟಕ ಪುದಾರ್ ದೀತಿಜಿ. ಇದೂ ಅಷ್ಟೇ, ಸೂಪರ್ ನಾಟಕ. ಬಿಡುವಾದರೆ ಕೇಳಿ ನೋಡಿ.
ಯಾಕೋ ನಾಟಕದ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಇಷ್ಟ ಆಗುತ್ತಿಲ್ಲ. ಹೀಗೆ ಇರಲಿ! ಇನ್ನೊಂದು ದಿನ ನೋಡೋಣ.

Sunday, March 29, 2009

ಸಂಕ್ರಾಂತೀಈಈಈ...... ಇದು ಧರ್ಮ ಸಂಕ್ರಾಂತಿ..

ಇದೇನಿದು, ಯುಗಾದಿ ಸಮಯದಲ್ಲಿ ಸಂಕ್ರಾಂತಿ ಬಗ್ಗೆ ಬರೆಯುತ್ತಿದ್ದೇನೆ ಅಂದುಕೊಳ್ಳುತ್ತಿದ್ದೀರಾ?
ಧರ್ಮ ಸಂಕ್ರಾಂತಿ ಅನ್ನುವುದು ಒಂದು ಯಕ್ಷಗಾನ ಪ್ರಸಂಗ. ಸಂದೀಪ್ ಕಾಮತರು ಕ್ಯಾಸೆಟ್ ಬಗ್ಗೆ ಬರೆದಾಗ ನಮ್ಮ ಮನೆಯಲ್ಲಿ ತುಂಬಿಕೊಂಡಿದ್ದ ರಾಶಿ ರಾಶಿ ಕ್ಯಾಸೆಟ್ ಗಳು ನೆನಪಾದವು. ಅದರಲ್ಲಿ ನನಗೆ ತುಂಬಾ ಇಷ್ಟವಾದ ಕ್ಯಾಸೆಟ್ ಗಳಲ್ಲಿ ಒಂದು ಧರ್ಮ ಸಂಕ್ರಾಂತಿ ಯಕ್ಷಗಾನದ್ದು. ಯಾವ ಮೇಳ ಎನ್ನುವುದೂ ನೆನಪಿಲ್ಲ, ಆದರೆ ಅದರ ಸುಮಾರು ಹಾಡುಗಳು, ಸಂಭಾಷಣೆಗಳು ಮರೆಯುವುದು ಸಾಧ್ಯವೇ ಇಲ್ಲ.
ಕಥೆ ನಾನು ಹೇಳಬಯಸುವುದಿಲ್ಲ. ಒಂದಷ್ಟು ಸನ್ನಿವೇಶಗಳು/ಹಾಡುಗಳನ್ನು ಮಾತ್ರ ನೆನಪಿಸಿಕೊಂಡು ಬರೆಯುತ್ತಿದ್ದೇನೆ.
ಹಾಗೇ ಬರೆಯುವಾಗ ಒಂದಷ್ಟು ಪದಗಳು ತಪ್ಪಾಗಿರಬಹುದು, ದಯವಿಟ್ಟು ಕ್ಷಮಿಸಿ.

ಮೊದಲಿಗೆ ನೆನಪಾಗುವುದು ಪ್ರಾಸಬದ್ಧವಾಗಿ ಗುರು-ಶಿಷ್ಯರು ಆಡುವ ಮಾತುಗಳು. ಶಿಷ್ಯನಿಗೆ ವಿಧಿಯಲ್ಲಿ ನಂಬಿಕೆ ಇಲ್ಲ.
ಶಿಷ್ಯ: ಜಾತಕ ಫಲವದು ನಿಜವೇ?
ಗುರು: ಅದು ನಿಜವೇ..
ಎಷ್ಟು ಚೆನ್ನಾಗಿ ಭಾಷೆಯನ್ನೂ ಬಳಸಿಕೊಂಡಿದ್ದಾರೆ ಇಲ್ಲಿ. ಶಬ್ದ ಅದೇ ಆದರೂ ಆಡುವ ಮಾತಿನಿಂದಾಗಿ ಒಂದು ಪ್ರಶ್ನೆಯಾದರೆ ಇನ್ನೊದು ಉತ್ತರ!

ಕಥೆ ತುಂಬಾ ಮುಂದುವರಿದ ಮೇಲೆ ಮುಘಲರು ಆವಂತಿಯ ಮೇಲೆ ಆಕ್ರಮಣ ಮಾಡುವ ಮೊದಲು ಒಂದಷ್ಟು ಜನರನ್ನು ಆವಂತಿಯ ಮೇಲೆ ಗೂಡಚಾರಿಕೆ ಮಾಡಲು ಕಳಿಸುತ್ತಾರೆ. ಅವರು ವೇಷ ಮರೆಸಿಕೊಂಡು ಬಂದ ಸಂದರ್ಭ, ಮಡಿವಾಳ ರಾಜಕುಮಾರನಲ್ಲಿ ನ್ಯಾಯ ಕೇಳಲು ಬಂದಿದ್ದಾನೆ.
ಹಾಡು೧:
ಮಡಿವಾಳ ಮಾಚಯ್ಯ ಬಂದ,
ಎನಗೆ ಕೊಡಿಸಯ್ಯ ನ್ಯಾಯವನೆಂದ..
ಮಡದಿಯ ಪಡೆಯಲು ನಾನು..
ಸಾಲ ಪಡೆದೆನು, ಸಾಲ ಪಡೆದೆನು
ಕರುಣಾಳು ನೀನು..

ಹಾಡು೨:
ಕತ್ತೆಯಾ, ಕನ್ನೆ ಕಟ್ಟೆಯ ಒತ್ತೆಯಿಟ್ಟೆ..
ಆ ರನ್ನೇ.... ಬಸುರಿ,
ಬಸುರಿ ಆ ರನ್ನೇ ನಾನು ಕೆಟ್ಟೆ...

ಮುಂದೆ ಮುಘಲರು ಸಂಕ್ರಾಂತಿಯ ದಿನ ಆವಂತಿಯ ಮೇಲೆ ಆಕ್ರಮಣ ಮಾಡುವುದಾಗಿ ನಿರ್ಧಾರ ಮಾಡುತ್ತಾರೆ. ಆಗಲೂ ಇಬ್ಬರು ಮುಸ್ಲಿಮರು ಬ್ರಾಹ್ಮಣರ ಹಾಗೆ ವೇಷ ಮರೆಸಿಕೊಂಡು ಅವನತಿಗೆ ಬರುತ್ತಾರೆ. ರಾಜಕುಮಾರಿಯನ್ನು ಅಪಹರಿಸಿ ಅದೇ ಸಮಯದಲ್ಲಿ ಆಕ್ರಮಣ ಮಾಡುವುದು ಅವರ ಉದ್ದೇಶ.

ಅವರನ್ನು ನೋಡಿದ ಕೂಡಲೇ ರಾಜ ನೀವು ಈ ಊರಿನವರ ಹಾಗೆ ಕಾಣಿಸುತ್ತಿಲ್ಲ, ಯಾರು ನೀವು ಯಾವ ಊರು ಎಂದು ಕೇಳಿದ ಕೂಡಲೇ ಬರುವ ಹಾಡು:
ಕಾಶೀ ಕ್ಷೇತ್ರದ ಕಾಶೀ ವಿಶ್ವರು
ದೇಶ ಸಂಚಾರಕೆ ಹೊರಟವರು..
ಕಾಶೀ.. ವಿಶ್ವ...

ಕಾಶಿ: ಎಮ್ಮ ಪರಿಚಯವೇ? ಎನ್ನ ಹೆಸರು ಕಾಶಿ ಎಂದು. ಎನ್ನಪ್ಪ .....(ಹೆಸರು ಮರೆತು ಹೋಗಿದೆ), ಎನ್ನಮ್ಮ ..... ದಶಮ ಗರ್ಭ ಸಂಜಾತನಿರ್ಪೆ. ಈತ ವಿಶ್ವ, ಕಾಯಿಸಿಪ್ಪೆಯಲ್ಲೇ ಹುಟ್ಟಿದವನು
ರಾಜ: ??
ಕಾಶಿ: ಕಾಶ್ಯಪ ಗೋತ್ರದವನು, ಕಾಯಿಸಿಪ್ಪೆಯಲ್ಲಿ ಹುಟ್ಟಿದವನು.
ವಿಶ್ವ: ಹೌದೌದು, ಎನ್ನ ಜನನ ಕಾಲದಲ್ಲಿ ಅವಘಡ ಒಂದು ಆಗಿರ್ಪುದು. ಎನ್ನಮ್ಮ ಎನ್ನ ಹೆತ್ತ ಹಸೆಯಲ್ಲಿಯೇ ಇಹ ಲೋಕವನ್ನು ತ್ಯಜಿಸಿ ಹೋಗಿರ್ಪಳು. ಅಷ್ಟು ಮಾತ್ರವಲ್ಲ, ಎನ್ನ ಹಿರಿಯ ಹೆಂಡತಿಯೊಬ್ಬಳು(???) ಓಡಿ ಹೋಗಿರ್ಪಳು.
ಇನ್ನೊಂದಷ್ಟು ಉಭಯ ಕುಶಲೋಪರಿ ನಡೆಸಿದ ಮೇಲೆ:
ಕಾಶಿ: ಇಂದು ನಾಳೆ ಎಂತದೋ ಹಬ್ಬ ಉಂಟಲ್ಲ
ವಿಶ್ವ: ಹಬ್ಬ ಹಬ್ಬ ರಂಜಾನ್!!
ಕಾಶಿ: ಸರಿ ಮಾಡಲು ಹೇಳದ ಶಬ್ದವನ್ನು ಹೇಳಿದರೆ ನಾನು ಹೇಗೆ ಸರಿ ಮಾಡಿ ಸಾಯಲಿ. ರಂಜನೀಯವಾಗಿರುವುದಂತೆ?
ರಾಜ: ಹೌದು, ಇಂದು ಧರ್ಮ ಸಂಕ್ರಾಂತಿ. ಗಾಯನ ನೃತ್ಯ ಭೋಜನ ಎಲ್ಲ ನಡೆಯುವುದು.
ಕಾಶಿ: ಧರ್ಮ ಸಂಕ್ರಾಂತಿಯ ಉತ್ಸವವನ್ನು ಧರ್ಮಕ್ಕೆ ನೋಡಿ ಹೋಗಲು ಬಂದವರು.
ರಾಜ: ಧರ್ಮಕ್ಕೇ ನೋಡಲು ಬಂದವರೋ?
ಕಾಶಿ: ಊರೂರು ತಿರುಗುವ ಎಮ್ಮಲ್ಲಿ ಕಾಸೆಲ್ಲಿ?
ರಾಜ: ನೋಡುವುದಕ್ಕೆ ಅವಕಾಶವುಂಟು, ಹೀಗೆ ಬನ್ನಿ..

ರಾಜ ಅವರನ್ನು ನೃತ್ಯ ನಡೆಯುವ ಸಭೆಯ ಬಳಿ ಕರೆದುಕೊಂಡು ಹೋಗುತ್ತಾನೆ.
ಕಾಶಿ, ವಿಶ್ವ: ಅಲ್ಲಾ, ಅಲ್ಲಾ, ಅಲ್ಲಾ...
ರಾಜ: ನೀವು ಯಾವ ಜಾತಿಯವರು?
ಕಾಶಿ: ನಾವು ಬ್ರಾಹ್ಮಣರೇ ಇರ್ಪೆವು.
ರಾಜ: ಇಲ್ಲಿ ನಡೆಯುತ್ತಿರುವೆದೆಲ್ಲಾ ಹೌದು, ಹಾಗಿರುವಾಗ ನೀವು ಅಲ್ಲಾ ಅನ್ನಲು ಕಾರಣ?
ಕಾಶಿ: ಅಲ್ಲಾ ಎನ್ನಲು ಕಾರಣ ಇರ್ಪುದಲ್ಲಾ(ಇರ್ಪುದು+ಅಲ್ಲಾ!)
ರಾಜ:??
ಕಾಶಿ: ನಾವು ಇಲ್ಲಿಗೆ ಬಂತಲ್ಲಾ, ಬಂದು ಇಲ್ಲಿ ನಿಂತೆವಲ್ಲಾ..
ಕಾಶಿ: ಇಲ್ಲಿ ಕಟ್ಟಿರುವ ಜಾಲರಿಯೇನ್, ಜೋಲರಿಯೇನ್.. ಗಾಯಕರೇನ್, ವಾದಕರೇನ್ , ಬಾಧಕರೇನ್(??).. ಇದೆಲ್ಲ ನೋಡಿದ ನಮಗೆ ಇದೇನು ಇಂದ್ರಲೋಕವೋ, ಚಂದ್ರಲೋಕವೋ, ಯಮಲೋಕವೋ(??), ಶನಿಲೋಕವೋ(??)..
ರಾಜ: ಎಲ್ಲ ಲೋಕದ ದರ್ಶನವೂ ಆಯಿತೋ?
ಕಾಶಿ: ಹ್ಮ್.., ಅದೆಲ್ಲ ಅಲ್ಲಾ!! ಅಲ್ಲಾ ಎನ್ನಲು ಇಷ್ಟುದ್ದ ಕಾರಣವಿರ್ಪುದು!!

ನಂತರ Title song..
ಅದ್ಭುತ ಗಾಯನ.
ಸಂಕ್ರಾಂತೀಈಈಈಈ..... ಹೆಚ್ಚು ಕಮ್ಮಿ ಮೂರು ನಿಮಿಷ ಇದೆ ರೀತಿ ಆಲಾಪನೆ ಮಾಡುವುದು ಸಾಮಾನ್ಯದ ಮಾತಲ್ಲ.
ಇದು ಧರ್ಮ ಸಂಕ್ರಾಂತಿ.
ಶುಭದ ಧರ್ಮ ಸಂಕ್ರಾಂತಿ ..

ವಿಧಿಯ ನೆಲೆಗಟ್ಟು, ವಿಧಿಯ ಚೌಕಟ್ಟು
ವಿಧಿಯೇ ಧರ್ಮದ ಒಳ ಗುಟ್ಟು..

ಧರ್ಮದ ಹಣತೆಗೆ ಧರ್ಮದ ತೈಲವಿಕ್ಕಿ
ಧರ್ಮದ ಜ್ಯೋತಿಯ ಬೆಳಗೋಣ..

ಕೆಟ್ಟದ್ದ ನೋಡಬೇಡ, ಕೆಟ್ಟದ್ದ ಕೇಳಬೇಡ
ಕೆಟ್ಟದ್ದನ್ನೆಂದೂ ಮಾಡಬೇಡವೋ, ನೀ ಕೆಟ್ಟದ್ದನ್ನೆಂದೂ ಮಾಡಬೇಡವೋ..
ತಾನಿ ತಂದಾನ ತಾನಿ ತಂದನಾನ, ತಂದಾನೆ ತಂದನಾನಿ ತಂದನಾನೋ..

ಈ ಹಾಡು ಮುಗಿದ ಮೇಲೆ ಕಾಶಿ ಹಾಗೂ ವಿಶ್ವ ರಾಜಕುಮಾರಿಯನ್ನು ಭೇಟಿ ಮಾಡುತ್ತಾರೆ.
ನೆನಪಿನಲ್ಲಿರುವ ಒಂದಷ್ಟು ಮಾತುಗಳು:
ರಾಜಕುಮಾರಿ: ಹೇಗಿತ್ತು ಗಾಯನ?
ಕಾಶಿ: ತಾನಿ ತಂದಾನ, ತಂದ ತಾನೇ ತಿಂದಾನ..
ರಾಜಕುಮಾರಿ: ನಿಲ್ಲಿಸಿ, ಏನದು?
ವಿಶ್ವ: ಅವ ಹೇಳಿದ್ದರಲ್ಲಿ ತಪ್ಪೇನು? ತಾನು ತಂದದ್ದನ್ನು ತಾನು ತಿನ್ನದೇ ಇನ್ಯಾರು ತಿನ್ನುತಾನೆ? !!
ರಾಜಕುಮಾರಿ: ಹಾಗಲ್ಲ ಅದು, ತಂದಾನ ತಾನಿ ತಂದಾನ ಅಂತ. ಒಂದು ಬಗೆಯ ತಿಲ್ಲಾನ. ಹಾಡು ಹೇಗನಿಸಿತು?
ಕಾಶಿ: ಕೆಟ್ಟದ್ದ ನೋಡಬೇಡ, ಕೆಟ್ಟದ್ದ ಕೇಳಬೇಡ
ವಿಶ್ವ: ಕೆಟ್ಟದ್ದನ್ನೆಂದೂ ಆಡಬೇಡವೋ, ನೀ ಆಡಬೇಡವೋ.. ಯಾರಿಗೆ ಹೇಳಿದ ಮಾತು ಇದು?
ರಾಜಕುಮಾರಿ: ನಿಮಗೆ ಹೇಳಿದ್ದು.
ಕಾಶಿ: ನಾವೇನು ಕೆಟ್ಟದ್ದ ಮಾಡಿದ್ದೇವೆ?
ವಿಶ್ವ: ಒಮ್ಮೆ ಮಾಡಿದ್ದರೂ ಅದನ್ನು ನೋಡಿದವರು ಯಾರು?
ರಾಜಕುಮಾರಿ: ಹಾಗಲ್ಲ, ಅದು ಸರ್ವರಿಗೂ ಹೇಳಿದ ಮಾತು.
ವಿಶ್ವ: ಸರ್ವೇಯರಿಗೆ ಹೇಳಿದ ಮಾತೋ?
ಕಾಶಿ: ಇಲ್ಲ ಪಟೇಲರಿಗೆ ಹೇಳಿದ್ದು, ಸುಮ್ಮನಿರು

ಇನ್ನೂ ಒಂದಷ್ಟು ಹಾಸ್ಯಭರಿತ ಸಂಭಾಷಣೆಯ ನಂತರ ಏನೋ ಪಿತೂರಿ ಮಾಡಿ ರಾಜಕುಮಾರಿಯನ್ನು ಅಪಹರಿಸಿ ತಮ್ಮ ರಾಜನ ಬಳಿಗೆ ಕರೆದೊಯ್ಯುತ್ತಾರೆ. ಆಗ ಬರುವ ಹಾಡು:
ಪ್ಯಾರಿ ಬಾರೆ ಬಳಿಗೆ..
ಪ್ಯಾರೀ.. ಪ್ಯಾರೀ..
ಪ್ಯಾರಿ ಬಾರೆ ಬಳಿಗೆ........
ಈ ಹಾಡು ಹಾಡುವಾಗ ಅದ್ಭುತ variations in pitch. ಕೇಳಿಯೇ ಅನುಭವಿಸಬೇಕು.

ಆಗ ನಮ್ಮ hero ಪ್ರತ್ಯಕ್ಷ! ಅವನು ಅವಳನ್ನು ರಕ್ಷಿಸಿದ ಮೇಲೆ ಮತ್ತೊಂದು ಹಾಡಿದೆ!
ಹಾಗೆ ನೋಡಿದರೆ ಯಕ್ಷಗಾನದಲ್ಲಿ ಎಲ್ಲಾ ಸನ್ನಿವೇಶಕ್ಕೂ ಒಂದೊಂದು ಹಾಡಿದೆ!!
ಕಥೆ ಮುಂದುವರಿಯುತ್ತದೆ!

ಇರುವ ಮೂರು ಭಾಗಗಳಲ್ಲಿ ಎರಡನೇ ಭಾಗದ ಕ್ಯಾಸೆಟ್ ಮಾತ್ರ ಸರಿ ಇದ್ದ ಕಾರಣ ಅದರ ಹಾಡುಗಳು/ಮಾತುಗಳು ನೆನಪಿವೆ.

ಉಳಿದದ್ದು ನೆನಪಾದರೆ ಇನ್ನೊಂದು ದಿನ ಬರೆಯುತ್ತೇನೆ. ನೀವೂ ಯಕ್ಷಗಾನ ಸಿಕ್ಕಿದರೆ ನೋಡುತ್ತೀರಲ್ಲಾ?

Sunday, March 22, 2009

ಇನ್ನೊಂದು ಭಯಾನಕ ರಾತ್ರಿ!

ಅಬ್ಬಾ...
ಆ ರಾತ್ರಿಯನ್ನು ನೆನೆಸಿಕೊಂಡರೆ.. ಈಗಲೂ ಮೈ ಜುಮ್ಮೆನ್ನುತ್ತದೆ. ಆಗ ನಾನು ಮೈಸೂರಿನಲ್ಲಿದ್ದೆ. ಕಾಲೇಜು ಹಾಸ್ಟೆಲಿನಲ್ಲಿ ನಮ್ಮ ರೂಮಿನಲ್ಲಿ ಮೂರು ಜನ. ಯಾವಾಗಲೂ ಕಿರಿಚಾಡೋದು, ಜಗಳ ಮಾಡೋದು, ರಾತ್ರಿ ರಾತ್ರಿಯವೆರೆಗೆ ಸಿನಿಮಾ ನೋಡೋದು ಇದೆಲ್ಲ ಇದ್ದಿದ್ದೇ.

ಅವತ್ತು ಮಳೆ ಜೋರಾಗಿ ಬರುತ್ತಿತ್ತು, ಮಿಂಚು ಗುಡುಗು ಬೇರೆ. ನಮ್ಮ ಹಾಸ್ಟೆಲಿನಲ್ಲಿ earthing ಸರಿಯಾಗಿಲ್ಲದ ಕಾರಣ ಮಿಂಚು/ಗುಡುಗು ಬಂದ ತಕ್ಷಣ ಎಲ್ಲಾ computer ಹಾಗೂ ಹಾಲಿನಲ್ಲಿದ್ದ TV ಗೆ ವಿಶ್ರಾಂತಿ ಸಿಗುತ್ತದೆ. Internals ಹತ್ತಿರದಲ್ಲಿ ಇಲ್ಲದ ಕಾರಣ ಯಾರೂ ಓದುತ್ತಿರಲಿಲ್ಲ. ಬೇರೆ ಮಾಡಲು ಏನೂ ಇಲ್ಲದ ಕಾರಣ ಎಲ್ಲರೂ ಬೇಗ ಮಲಗಿದ್ದೆವು.

ಸರಿ, ನಿದ್ದೆಯೇನೋ ಬಂತು. ಆಮೇಲೆ ನಡೆದದ್ದು, ಅಬ್ಬಾ...
ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಕಿಟಕಿ ತೆಗೆದಿಟ್ಟರೆ ತಂಪು ಗಾಳಿ ಬರುತ್ತದೆ ಎಂದು ಒಂದು ಕಿಟಕಿ ತೆಗೆದೆ ಮಲಗಿದ್ದೆವು. ಜೋರಾಗಿ ಗುಡುಗಿದಾಗ ನನಗೆ ಎಚ್ಚರವಾಯಿತು. ಅವರಿಬ್ಬರಿಗೂ ಎಚ್ಚರವಾಯಿತೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆಗ ಸಮಯ ನೋಡಿದರೆ ಸುಮಾರು 2.30. ಇನ್ನೇನು ನಿದ್ದೆ ಬರಬೇಕು ಮತ್ತೊಂದು ಗುಡುಗು. ಮತ್ತೂ ಒಂದಷ್ಟು ಹೊತ್ತು ಸುಮ್ಮನೆ ಹೊರಳಾಡುತ್ತಿದ್ದೆ. ಇಂಥಾ ಸಮಯದಲ್ಲಿ ಯಾವಾಗಲೂ ಕರೆಂಟ್ ಕೈ ಕೊಡುತ್ತದೆ, ಅವತ್ತೂ ಕೂಡ ಹಾಗೇ ಆಯಿತು.

ಆಮೇಲೆ ಇನ್ನೇನೋ ವಿಚಿತ್ರವಾದ ಶಬ್ದ ಕೇಳಲು ಶುರುವಾಯಿತು. ಇಂಥಾ ಶಬ್ದಗಳು ನನಗೆ ಮಾತ್ರವೇ ಯಾಕೆ ಕೇಳುತ್ತವೆ, ಅದೂ ಗೊತ್ತಿಲ್ಲ. ಯಾರೋ ಹತ್ತಿರದಲ್ಲೇ ನಡೆದಾಡಿದಂತೆ, ಯಾವುದೋ iron rod ಎಳೆದಾಡಿದಂತೆ ಕೇಳಿಸುತ್ತಿತ್ತು. ಮಧ್ಯ ಮಧ್ಯದಲ್ಲಿ ಜೋರಾಗಿ ಗುಡುಗು ಬೇರೆ.

ಮುಸುಕು ತೆಗೆದು, ರೂಮ್ ಮೇಟ್ ಗಳನ್ನು ಕೂಗಲೂ ಭಯ. ಇನ್ನೇನು ಮಾಡುವುದು, ದೇವರನ್ನೇ ನೆನೆಯುತ್ತಾ ಹಾಗೆ ಮಲಗಿದ್ದೆ. ಅಷ್ಟು ತಂಪಾದ ಗಾಳಿ ಬೀಸುತ್ತಿದ್ದರೂ ನಾನು ಬೆವರಿ ಮುದ್ದೆಯಾಗಿದ್ದೆ. ನಿಧಾನವಾಗಿ ಸದ್ದು ಕೇಳುವುದು ಕಡಿಮೆಯಾಯಿತು. ಆದರೂ ರಾತ್ರಿಯೆಲ್ಲಾ ನಿದ್ದೆ ಬರಲೇ ಇಲ್ಲ. ಬೆಳಗ್ಗೆ 6 ಗಂಟೆ ಹೊತ್ತಿಗೆ ಹಾಗೂ ಹೀಗೂ ನಿದ್ದೆ ಬಂತು.

ಆದರೂ ೮ ಗಂಟೆಯೊಳಗೆ ಏಳಲೇ ಬೇಕು. ಕಾಲೇಜಿಗೆ ಹೋಗುವುದು ಬೇಡವೇ. ಬೆಳಗ್ಗೆ 7.30 ಹಾಗೆ ಎದ್ದಾಯಿತು. ಆದರೂ ಯಾರ ಹತ್ತಿರವೂ ಏನೂ ಹೇಳಲಿಲ್ಲ. ಎಲ್ಲಿ ಎಲ್ಲವೂ ನನ್ನ ಕಲ್ಪನೆಯೋ/ಕನಸೋ ಎಂಬ ಭಯ.

ಆಮೇಲೆ ಸ್ನಾನ ಎಲ್ಲಾ ಆದ ಮೇಲೆ ತಿಂಡಿ ತಿನ್ನಲು mess ಕಡೆಗೆ ಹೋದೆವು. ದಿನವೂ ಅಲ್ಲಿ ಹೋಗಿ ತಿಂಡಿ ತಿನ್ನುವ ಮೊದಲು ಕೈ/ತಟ್ಟೆ ತೊಳೆಯುವುದು ಮೊದಲಿನಿಂದಲೇ ಬಂದಿರುವ ಒಳ್ಳೆಯ ಅಭ್ಯಾಸ. ಅಲ್ಲಿಗೆ ಹೋಗಿ ನೋಡಿದರೆ ಅಲ್ಲಿನ steel tapಗಳು ಮಾಯ!
ಆಗ ಗೊತ್ತಾಯಿತು ರಾತ್ರಿ ನಡೆದದ್ದು ಏನು ಅಂತ!!!!

Mess ಇನ್ನೂ ಸಂಪೂರ್ಣವಾಗಿ construction ಆಗಿರಲಿಲ್ಲ. ಅದರ ಕಿಟಕಿಯನ್ನು ಯಾರು ಬೇಕಾದರೂ ಹೊರಗಿನಿಂದ ತೆಗೆಯಬಹುದಿತ್ತು! ನಮ್ಮ ರೂಮಿನ ಕಿಟಕಿಯಿಂದ messನಲ್ಲಿ ಏನಾಗುತ್ತಿದೆ ಎನ್ನುವುದನ್ನು ಆರಾಮಾಗಿ ನೋಡಬಹುದು. ಯಾರೋ ಕಳ್ಳರು ರಾತ್ರಿಯೇ ಬಂದು ಎಲ್ಲಾ tagಗಳನ್ನೂ ಕದ್ದಿದ್ದರು! ರೂಮಿನ ಕಿಟಕಿ ತೆರೆದೇ ಇದ್ದ ಕಾರಣ ಶಬ್ದ ಜೋರಾಗಿ ಕೇಳಿದೆ!

ಛೆ, ನಾನು ಸ್ವಲ್ಪ ಧೈರ್ಯ ಮಾಡಿದ್ದರೆ ಒಂದು ಕಳ್ಳತನವನ್ನು ತಪ್ಪಿಸಬಹುದಿತ್ತು. ಆದರೂ ನನಗಿರುವ ಒಂದೇ ಒಂದು ಅನುಮಾನ, ನಾವೆಲ್ಲಾ ಮಲಗಿದ್ದರೂ ನಮ್ಮ ಹಾಸ್ಟೆಲಿಗೆ ಗಸ್ತು ತಿರುಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಈ ಶಬ್ದ ಯಾಕೆ ಕೇಳಲಿಲ್ಲ?

Thursday, March 5, 2009

ಬೆಕ್ಕಿಗೇನು ಚಿಂತೆ?ವರುಣ್ ತೆಗೆದ ಫೋಟೊ, ಅವನ ಅನುಮತಿ ಇಲ್ಲದೆ ಹಾಕುತ್ತಿದ್ದೇನೆ!
ಈ ಬೆಕ್ಕಿಗೆ ಏನು ಆಲೋಚನೆ ಇರಬಹುದು ಎನ್ನುವುದೇ ನನಗೆ ಚಿಂತೆಯಾಗಿದೆ!!
ಇದಕ್ಕೆ ಹಾಲಿಗೆ ಕೊರತೆ ಉಂಟಾಗಿರಬಹುದಾ, ಇಲ್ಲಾ ಮನೆಯೊಡತಿ ಹಾಕುವ ಅನ್ನ ಕಡಿಮೆ ಮಾಡಿರಬಹುದಾ?
ಮನೆಯಲ್ಲಿ ಇಲಿಗಳ ಸಂಖ್ಯೆ ಕಡಿಮೆಯಾಗಿರಬಹುದಾ ಅಥವಾ ಮನೆಯೊಡೆಯ ಇನ್ನೊಂದು ಬೆಕ್ಕನ್ನು ಸಾಕಲು ತಂದಿರಬಹುದಾ?
ಇದಕ್ಕೇನು ಆರ್ಥಿಕ ಹಿಂಜರಿತದಿಂದಾಗ ಮನೆ ನಡೆಸಲು ಕಷ್ಟವಾಗಿದೆಯಾ?
ಮನೆಯವರ ಮೇಲೆ ಸಿಟ್ಟು ಮಾಡಿ ಟೂ ಬಿಟ್ಟಿರಬಹುದಾ?
ಬೆಳಗ್ಗೆ ಹೊರಗಡೆ ಹೋದ ಮನೆಯವರಿಗಾಗಿ ದಾರಿ ಕಾಯುತ್ತಿರಬಹುದಾ?
ಆಟ ಆಡಲು ಹೋದ ಮಕ್ಕಳನ್ನು(ಮರಿ ಬೆಕ್ಕುಗಳು) ದೂರದಿಂದಲೇ ನೋಡುತ್ತಿರಬಹುದಾ?
ಇಲ್ಲಾ ಬಾಲ ಹೇಳಿದ ಹಾಗೆ ಸೂರ್ಯ ನಮಸ್ಕಾರ ಮಾಡುತ್ತಿರಬಹುದಾ?
ಇಂದ್ರ ಪದವಿಗಾಗಿ ತಪಸ್ಸು ಮಾಡುತ್ತಿದೆಯಾ? ಯೋಗ, ಧ್ಯಾನದಲ್ಲಿ ನಿರತವಾಗಿದೆಯಾ?
ಏನಾಗಿರಬಹುದು?ಏನಾದರೆ ನಿನಗೇನು?
ನಿನ್ನ ಕೆಲಸ ನೀನು ನೋಡಿಕೋ, ನನ್ನ ತಂಟೆಗೆ ಬರಬೇಡ ಅನ್ನುವ ಹಾಗೆ ನೋಡುತ್ತಿದೆ ಮುಂದಿನ ಫೋಟೋದಲ್ಲಿ!

Sunday, February 15, 2009

ಹಾಡು ಹಳೆಯದಾದರೇನು..

ಹಳೆಯ ಹಾಡುಗಳನ್ನು ಕೇಳಿದರೆ ಹಾಡುಗಾರರಿಂದ ಹೆಚ್ಚು ನಟ/ನಟಿಯರೇ ಕಣ್ಣ ಮುಂದೆ ಕಾಣಿಸುತ್ತಿದ್ದರು.
ಒಂದಷ್ಟು ಉದಾಹರಣಗಳು:
"ಮೇರೇ ನೈನಾ ಸಾವನ್.." ಅಂತ ಹಾಡು ಕೇಳಿದಾಗ ಮೊದಲು ರಾಜೇಶ್ ಖನ್ನಾ, ನಂತರ ಕಿಶೋರ್ ಕುಮಾರ್ ತಾನೇ ಕಾಣಿಸುವುದು.
"ಕಿ ಪಘ್ ಘುಂಗರೂ ಬಾಂದ್, ಮೀರಾ ನಾಚೀ ಥೀ.." ಅಂತ ಹಾಡಿದ್ದು ಅದೇ ಕಿಶೋರ್ ಕುಮಾರ್, ಆದರೆ ಕಣ್ಣಿಗೆ ಕಾಣಿಸುವುದು ಅಮಿತಾಭ್ ಬಚ್ಚನ್ ಅಲ್ವಾ?
"ತಾರೀಫ್ ಕರೂಂ ಕ್ಯಾ ಉಸ್ ಕೀ.." ಅಂದರೆ ಮೊಹಮ್ಮದ್ ರಫೀಗಿಂತ ಹೆಚ್ಚು ಶಮ್ಮೀ ಕಪೂರ್ ಕಾಣಿಸುತ್ತಾರೆ ಅಲ್ವಾ?
"ಕಭೀ ಕಭೀ ಮೇರೇ ದಿಲ್ ಮೇ.." ಅಂತ ಅಂದ್ರೆ ಅಮಿತಾಭ್ ಬಚ್ಚನಾ ಇಲ್ಲಾ ಮುಕೇಶಾ ನೀವೇ ಹೇಳಿ?
"ಪಿಯಾ ತೂ ಅಬ್ ತೊ ಆಜಾ.." ಇದು ಆಶಾ ಭೋಸ್ಲೆನಾ ಇಲ್ಲಾ ಹೆಲೆನ್ಆ?

ಆದರೆ ಈಗ ಹಾಡುಗಳನ್ನು ಕೇಳಿ:
"ಅನಿಸುತಿದೆ ಯಾಕೋ ಇಂದು.." ಹಾಡು ಕೇಳಿದರೆ ಬರೀ ಸೋನು ನಿಗಮ್ ಕಾಣಿಸುತ್ತಾರೆ, ಗಣೇಶ್ ಅಂತ ಗೊತ್ತಾಗೋದು ಸಿನೆಮಾ ನೋಡಿದ ಮೇಲೇನೇ.
"ದಿಲ್ ಯೆ ದಿಲ್, ದೀವಾನಾ.." ಇದು ಶಾರುಖ್ ಖಾನ್ ಗೋಸ್ಕರ ಹಾಡಿದ್ದು ಅಂತ ನನಗೆ ಯಾವತ್ತೂ ಅನಿಸಲಿಲ್ಲ, ಹಾಡನ್ನು ಕಲ್ಪಿಸಲು ಹೊರಟರೆ ಬರೀ ಸೋನು ನಿಗಮ್ ಕಾಣಿಸುತ್ತಾರೆ.
"ಓ ಮಿತ್ವಾ, ಸುನ್ ಮಿತ್ವಾ.." ಇದು ಉದಿತ್ ನಾರಾಯಣ್ ತಾನೇ? ಅಮೀರ್ ಖಾನ್ ಕಾಣಿಸುತ್ತಾರಾ?
"ಆಮೀ ಝೇ ತುಮಾರೋ.." ಅಂದರೆ ಶ್ರೇಯಾ ಘೋಶಾಲ್ ಬಿಟ್ಟು ವಿದ್ಯಾ ಬಾಲನ್ ಕಲ್ಪಿಸುವುದು ನನಗಂತೂ ಸಾಧ್ಯವಿಲ್ಲ.

ಈಗಿನ ಹಾಡುಗಳೂ ಚೆನ್ನಾಗಿವೆ, ಆದರೆ ಮೊದಲು ನಟ/ನಟಿಯರಿಗೋಸ್ಕರ ಹಾಡುತ್ತಿದ್ದರು, ಈಗಿನವರು ಬರೀ ತಮಗಾಗಿ ಹಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತದೆ! ನಿಮಗೆ?

Sunday, February 8, 2009

ಭಯಾನಕ ರಾತ್ರಿ

ಅವತ್ತು ನಾನು ರೂಮಿನಲ್ಲೇ ಒಬ್ಬಳೇ ಇದ್ದೆ. ಆಗಷ್ಟೆ ಘಂಟೆ ೧೨ ಕಳೆದಿತ್ತು.
ಹೊರಗಡೆ ನಾಯಿಗಳು ಏನನ್ನೋ ನೋಡಿ ಬೊಗಳುತ್ತಿದ್ದವು, ಬೀದಿಯಲ್ಲಿದ್ದ ಎಲ್ಲಾ ನಾಯಿಗಳೂ ಸೇರಿದ್ದವು ಎನ್ನುವಷ್ಟು ಜೋರಾಗಿ ಅವು ಬೊಗಳುವುದು ಕೇಳಿಸುತ್ತಿತ್ತು.
ರೂಮಿನಲ್ಲಿ ಯಾವುದೋ ಪ್ಲಾಸ್ಟಿಕ್ ಚೀಲವನ್ನು ಯಾರೋ ಆ ಕಡೆ ಈ ಕಡೆ ಎಳೆದಾಡುತ್ತಿದ್ದಾರೆ ಅನ್ನುವ ಹಾಗೆ, ಮೇಲ್ಗಡೆ ಯಾರೋ ನಡೆದಾಡುತ್ತಿದ್ದಾರೆ ಅನ್ನುವ ಹಾಗೆ, ಹೊರಗಡೆ ಯಾರೋ ಚೀರಿದ ಹಾಗೆ, ಇನ್ನೂ ಏನೇನೋ ಶಬ್ದಗಳು..

ನಾನು ಮೊದಲೇ ಅಂಜುಬುರುಕಿ, ಹೇಗೋ ಧೈರ್ಯ ಮಾಡಿ ರೂಮಿನಲ್ಲಿದ್ದ ಚಿಕ್ಕ bulb ಒಂದನ್ನು on ಮಾಡಿ ಮುಸುಕು ಹಾಕಿ ಮಲಗಿದೆ.
ಬೆಳಕಿದ್ದ ಕಾರಣ ಭಯ ಕಡಿಮೆ ಆಗಿತ್ತು. ಸ್ವಲ್ಪ ನಿದ್ದೆ ಬಂತು ಅಂದಾಗ ಯಾರೋ ರೂಮಿನ ಬಾಗಿಲನ್ನು ತೆಗೆದರು, ದಡ್ ಅನ್ನುವ ದೊಡ್ದ ಶಬ್ದ ಬೇರೆ! ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು.

ಅಷ್ಟರಲ್ಲಿ ದೀಪ ಆರಿಸಿದ ಸದ್ದು ಕೇಳಿಸಿತು, ಕಣ್ಣು ಬಿಟ್ಟರೆ ಎಲ್ಲಾ ಕತ್ತಲು. ಆಮೇಲೆ ಏನೂ ಸದ್ದಿಲ್ಲ. ದೀಪ ಆರಿಸಿದ ಸದ್ದೇ ಕೊನೆಯದು. ತುಂಬು ಮೌನ(pin drop silence ಅಂತಾರಲ್ಲ ಹಾಗೇ). ಇನ್ನೇನು ಮಾಡೋದು ಗೊತ್ತಾಗ್ತಿಲ್ಲ. ಎದ್ದು ನೋಡಲೂ ಭಯ, ಮಲಗಿರಲೂ ಆಗುತ್ತಿಲ್ಲ.

ಅಷ್ಟೋ ಇಷ್ಟೋ ಧೈರ್ಯ ಮಾಡಿ, ಮೊಬೈಲ್ ನಲ್ಲಿದ್ದ torch on ಮಾಡಿ ನೋಡಿದೆ, ರೂಮಿನಲ್ಲಿ ಯಾರೂ ಕಾಣಿಸುತ್ತಿಲ್ಲ. ಮುಂದೇನು ಮಾಡುವುದು? ಈ ಶಬ್ದಗಳು ನನಗೆ ಮಾತ್ರ ಕೇಳಿದ್ದೋ ಅನ್ನುವುದನ್ನ ಖಚಿತ ಪಡಿಸಿಕೊಳ್ಳಬೇಕಿತ್ತು. ಸರಿ ಅಂತ ಹೊರಗೆ ಮಲಗಿದ್ದ ನನ್ನ ಗೆಳತಿಗೆ ಮಲಗಿದಲ್ಲಿಂದಲೇ ಫೋನ್ ಮಾಡಿದೆ.

ಮುಂದೇನಾಯಿತು ಅಂತ ಯೋಚಿಸುತ್ತಿದ್ದೀರಾ? ಅವಳು ತಾನೇ ಬಲ್ಬ್ on ಮಾಡಿ off ಮಾಡಲು ಮರೆತೆ ಅಂದುಕೊಂಡು ಬಂದು off ಮಾಡಿ ಹೋಗಿದ್ದಳಂತೆ!!!! ಹೋದ ಜೀವ ಮತ್ತೆ ಬಂತು. ನನ್ನ ಸ್ತಿಥಿ ನೋಡಿ ನನಗೇ ನಗು ಬಂತು.
ಮತ್ತೆ ಮಲಗಿ ನಿದ್ದೆ ಮಾಡಿದೆ :-)
ಈಗ ದಿನಾ ಮಲಗುವ ಮುಂಚೆ ಅವಳಿಗೆ light off ಮಾಡಬೇಡ ಅಂತ ಹೇಳುವುದನ್ನು ಮಾತ್ರ ಮರೆಯುವುದಿಲ್ಲ.

Sunday, February 1, 2009

ಯೆ ಹೈ.. ವಿವಿಧ್ ಭಾರತಿ..

ಮೈಸೂರಿನಲ್ಲಿ ಇದ್ದಾಗ ಗಣಕಯಂತ್ರ ಕೆಟ್ಟಿದ್ದಾಗ ನನ್ನ ರೂಮ್ ಮೇಟ್ ಮೊಬೈಲ್ ಫೋನೇ ನಮಗೆ ಹಾಡು ಕೇಳುವ ಸಾಧನ!
ಅದೂ ಅದರಲ್ಲಿ mp3 player ಇರಲಿಲ್ಲ, ಬೆಂಗಳೂರಿನಲ್ಲಿ ಇರುವಂತೆ ಹತ್ತಾರು F.M. channel ಗಳೂ ಇರಲಿಲ್ಲ, ಬರೀ ಆಕಾಶವಾಣಿ ಮೈಸೂರು. ಅದರಲ್ಲಿ ಬೆಳಗ್ಗೆ 10 ರಿಂದ 11 ರವರೆಗೆ ಬರುವ ತಮ್ ನಮ್ ಕನ್ನಡ ಚಿತ್ರಗೀತೆಗಳು ಹಾಗೂ 11 ರಿಂದ 12 ರವರೆಗೆ ಬರುವ ಝನಕ್ ಝನಕ್(ಕಾರ್ಯಕ್ರಮದ ಹೆಸರು ಸರಿಯಾಗಿ ನೆನಪಿಲ್ಲ) ಹಿಂದೀ ಚಿತ್ರಗೀತೆಗಳೇ ನಮಗೆ entertainment package!

ಆದರೆ ನನಗೆ ಮಧ್ಯಾಹ್ನ ವಿವಿಧ ಭಾರತಿ ಸಹಪ್ರಸಾರದಲ್ಲಿ ಬರುತ್ತಿದ್ದ ಮೇರೀ ಸಹೇಲೀ ಹಾಗೂ ಇನ್ನೂ ಕೆಲವು ಕಾರ್ಯಕ್ರಮಗಳು ಹೆಚ್ಚು ಇಷ್ಟವಾಗಿದ್ದವು. ಈಗ ಮತ್ತೆ ವಿವಿಧ್ ಭಾರತಿ(102.9) ಕೇಳುತ್ತಿದ್ದೇನೆ, ಅದು ಬಿಟ್ಟರೆ FM Rainbow(101.3). ಕನ್ನಡ ಹಾಗೂ ಹಿಂದಿಯಲ್ಲಿ ನಾವು ಹೆಚ್ಚು-ಕಡಿಮೆ ಮರೆತೇ ಬಿಟ್ಟಿರುವಂತ ಹಾಡುಗಳೆಲ್ಲ ಹಾಕುತ್ತಾರೆ. ಅದರಲ್ಲಿ ಪ್ರಸಾರವಾಗುವ ಜಾಹೀರಾತುಗಳು ತುಂಬಾ ತಮಾಷೆಯಾಗಿರುತ್ತವೆ, ಅದರಲ್ಲಿ ಬರುವ ಸಂವಾದಗಳು ಇನ್ನೂ ಮಜ! :-)
ಇತ್ತೀಚೆಗೆ ನಡೆದ ಕೆಲವು ಸಂಗತಿಗಳು:

ವಿಷಯ 1:
ವಿಷಯ: ಇಂದಿನ ಯುವಜನತೆಯಲ್ಲಿ ಮೌಲ್ಯಗಳು ಇವೆಯೇ?
ಒಬ್ಬ ವ್ಯಕ್ತಿ call ಮಾಡಿ ಇಂದಿನ ಯುವಜನತೆಯಲ್ಲಿ ಮೌಲ್ಯಗಳು ಇಲ್ಲ, ಎಲ್ಲಾ ಬರೀ ಪಬ್, ಕ್ಲಬ್ ಅಂತ ಓಡಾಡುತ್ತಾರೆ, ಹೀಗೇ ಇನ್ನೂ ಏನೇನೋ ಹೇಳಿ ಕೊನೆಗೆ ಇನ್ನು ಯಾವ ಹಾಡು ಪ್ರಸಾರ ಮಾಡುತ್ತೀರಾ ಅಂತ ಕೇಳಿದ್ರು. ಅದಕ್ಕೆ host ಇನ್ನು ಮಿಲನ ಚಿತ್ರದ ನಿನ್ನಿಂದಲೇ ಹಾಡನ್ನು ಹಾಕುತ್ತೇವೆ ಎಂದಿದ್ದಕ್ಕೆ, ಅದು ಬೇಡ, ನಮಗೆ ಅನಾಥ ಮಗುವಾದೆ ಹಾದು ಇಷ್ಟ, ಅದನ್ನೇ ಹಾಕಿ ಎನ್ನಬೇಕೆ! ಪಾಪ host ಇಲ್ಲ, ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಸಮಯ ಮುಗಿದು ಹೋಯಿತು. ಒಂದಷ್ಟು ಹಾಡುಗಳನ್ನು ಮೊದಲೇ ಆಯ್ಕೆ ಮಾಡಿರುತ್ತೇವೆ. ಅದನ್ನೇ ಹಾಕುತ್ತೇವೆ ಅಂತ ಹೇಳಿ phone ಇಟ್ಟು ನಿನ್ನಿಂದಲೇ ಹಾಡನ್ನು ಪ್ರಸಾರ ಮಾಡಿದರು!

ವಿಷಯ 2:
ಬಸವ ಭವನದಲ್ಲಿ ನಡೆದ KSIC vintage saaree collection & exhibition ಅಲ್ಲಿ ಒಬ್ಬರು ನೇರವಾಗಿ ಅಲ್ಲಿ ನಡೆಯುತ್ತಿರುವುದನ್ನೆಲ್ಲಾ ಹೇಳುತ್ತಿದ್ದರು. ಸುಮಾರು ಒಂದು ವಾರ ಬರೀ ಸೀರೆಗಳದ್ದೇ ಮಾತು!! ಪಾಪ ಅವರಿಗೆ ಬೇರೆ ಇನ್ನೇನೂ ಸಿಗಲಿಲ್ಲ ಅನ್ಸತ್ತೆ! ಅದರಲ್ಲಿ ತುಂಬಾ ಚೆನ್ನಾಗಿ ತೆಗೆದಿಟ್ಟ ಅತ್ಯಂತ ಹಳೆಯ ಸೀರೆಗಳಿಗೆ ಬಹುಮಾನ ಬೇರೆ ಇತ್ತು. 1948ರಲ್ಲಿ ಖರೀದಿಸಿದ ಸೀರೆಗೆ ಮೊದಲ ಬಹುಮಾನ ಬಂತು. 50 ವರ್ಷ ಹಳೆಯದಾದ ಸೀರೆ! ಆರ್ಯಾಂಬ ಪಟ್ಟಾಭಿಯವರಿಗೆ ಈ ಬಹುಮಾನ ಬಂದಿತ್ತು. ಅವರನ್ನು ಮಾತನಾಡಿಸುವಾಗ ಸೀರೆಯನ್ನು ಬಿಟ್ಟು ಅವರ ಕಾದಂಬರಿಗಳು, ಕಪ್ಪು-ಬಿಳುಪು ಸಿನೆಮಾದ ಬಗ್ಗೆಯೇ ಹೆಚ್ಚು ಮಾತನಾಡಿದ್ದರು! KSIC ಸೀರೆಗಳ ಬಗ್ಗೆ ನಡೆಯಬೇಕಿದ್ದ ಕಾರ್ಯಕ್ರಮ ಮತ್ತೆಲ್ಲೋ! ರೇಡಿಯೋದಲ್ಲಿ ಈ ತರ ಆಗುವುದು ಸಹಜ ಎನ್ನುತ್ತೀರಾ?

ವಿಷಯ 3:
ಆದಿತ್ಯವಾರ ಬೆಳಗ್ಗೆ ವಿವಿಧ ಭಾರತಿ ಕೇಳಬೇಕು, ದಿನದ ಆರಂಭವೇ ಶೋಕಗೀತೆಗಳಿಂದ!! ಬೆಳಗ್ಗೆ ಎದ್ದ ಕೂಡಲೇ "ದುನಿಯಾ ಬನಾನೇವಾಲೇ" ಅಥವಾ "ಈ ದೇಹದಿಂದ ದೂರನಾದೆ" ಅಂತ ಹಾಡು ಕೇಳಿದರೆ ದಿನ ಹೇಗಿರಬೇಕು? ಹಾಗೇ ಸಂಜೆ ಹೊತ್ತಲ್ಲಿ ಬರುವ ಜಯಮಾಲ ಕಾರ್ಯಕ್ರಮದಲ್ಲೂ ಹೆಚ್ಚಾಗಿ ಶೋಕಗೀತೆಗಳು ಬರುತ್ತವೆ. ಇದು ಸೈನಿಕರ ಮೆಚ್ಚಿನ ಹಾಡುಗಳ ಕಾರ್ಯಕ್ರಮ. ಅವರು ಬರೀ ಶೋಕಗೀತೆಗಳನ್ನೇ ಕೇಳುತ್ತಾರಾ?

ನನಗೆ ಆದರೂ ಉಳಿದ F.M. stationಗಳಿಗಿಂತ ವಿವಿಧಭಾರತಿಯೇ ಹೆಚ್ಚು ಇಷ್ಟ. ನಾನು ಕೇಳದೇ ಇದ್ದಂತಹ ಅನೇಕ ಹಳೆ ಹಾಡುಗಳನ್ನು ಪರಿಚಯಿಸಿ ಕೊಟ್ಟಿದೆ, ಸಿಹಿ ಸಿಹಿ ಹಾಡುಗಳನ್ನೂ ಪ್ರಸಾರ ಮಾಡುತ್ತದೆ. ಸಂಜೆ ನಾನು ಏಕಾಂಗಿಯಾಗಿ ಸಮಯ ಕಳೆಯುವಾಗ ನನ್ನ ಸಂಗಾತಿ-ವಿವಿಧ ಭಾರತಿ(ಈ ರೀತಿ ಪ್ರಾಸಬದ್ಧವಾಗಿ ಮಾತನಾಡುವುದನ್ನೂ ಅಲ್ಲಿಂದಲೇ ಕಲಿತಿರುವೆ!) ಎಂದರೆ ತಪ್ಪಾಗಲಾಗದು.
ನೀವೂ ಕೇಳಿ-ಅಭಿಪ್ರಾಯ ಹೇಳಿ(ಮತ್ತೆ ಪ್ರಾಸ!! :-P)!

Wednesday, January 21, 2009

ನಾನೂ CCNA!!

ಕೊನೆಗೂ ನಾನು ಸಿಸ್ಕೋ ಪ್ರಮಾಣೀಕರಿಸಿದ ಜಾಲಬಂಧ ಭಾಗೀದಾರ(Cisco Certified Network Associate)!
ಒಂದು ಸರ್ತಿ ಪರೀಕ್ಷೆಯಲ್ಲಿ just fail ಆದ ಮೇಲೆ ಎರಡನೇ ಪ್ರಯತ್ನದಲ್ಲಿ just pass ಆಗಿರುವುದು ಮನಸ್ಸಿಗೆ ಖುಶಿ ತಂದಿದೆ :-)
ಪಾಸ್ ಆಗಲು 825 ಅಂಕಗಳು ಬೇಕು. ಮೊದಲನೇ ಪ್ರಯತ್ನದಲ್ಲಿ 822 ಬಂದರೆ ಎರಡನೇ ಬಾರಿ 871.
ಇನ್ನು ಮುಂದೆ ಯಾವುದೇ ಪರೀಕ್ಷೆ ಬರೆಯಬಾರದು ಅಂತ ಅದರ ಜೊತೆಗೇ ನಿರ್ಧಾರವನ್ನೂ ತೆಗೆದುಕೊಂಡಿದ್ದೇನೆ :P
ಅಂತೂ ಈ ಪರೀಕ್ಷೆ ತೆಗೆದುಕೊಂಡು ಪಾಸಾಗಿರುವ ಲಕ್ಷಾಂತರ ಜನರಲ್ಲಿ ನಾನೂ ಒಬ್ಬಳು ಅಂತ ಹೇಳಲು ನನಗೆ ತುಂಬಾ ತುಂಬಾ ಖುಶಿಯಗುತ್ತಿದೆ :-)

Friday, January 16, 2009

ನಾಯಿಗಳೂ, ಹಸುಗಳೂ...

ಮೊದಲು ನಾಯಿಗಳ ಬಗ್ಗೆ ಮಾತಾಡೋಣ:
ನಾನು ದಿನಾ ಆಫೀಸ್ ಕ್ಯಾಬ್ ಹಿಡಿಯಕ್ ಹೋಗೋ ದಾರೀಲಿ ಏನಿಲ್ಲಾ ಅಂದ್ರೂ 10-15 ಬೀದಿ ನಾಯಿಗಳ ಕಾಟ.
ಅವುಗಳು ಆಡೋದ್ ನೊಡಿದ್ರೆ ಒಂದೊಂದು ಗಲ್ಲಿನೂ ಒಂದೊಂದು ನಾಯಿಗ್ ಸೇರಿದ್ದು ಅಂತ ಅನ್ಸತ್ತೆ. ಅಪ್ಪಿ ತಪ್ಪಿ ಆ ಬೀದಿ ನಾಯಿ ಈ ಬೀದಿಗ್ ಬಂತು ಅಂದ್ರೆ ಆವಾಗ್ ಜಗ್ಳ ಶುರು. ಒಂದು ಇನ್ನೊಂದನ್ನು ನೋಡಿ ಬೊಗಳೊದೇನೋ, ಆ ಕಡೆಯಿಂದ ಈ ಕಡೆ ಅಟ್ಟಿಸ್‌ಕೊಂಡ್ ತಾನೂ ಓಡೋದೇನೋ!
ಒಂಥರಾ ಒಂದ್ ಬೀದೀಗೆ ಒಂದ್ ಡಾನ್, ಅಲ್ವಾ?
ಆದ್ರೆ ರಾತ್ರಿ ಎಲ್ಲಾ ಒಂದೇ party! ಎಲ್ಲ ಜೊತೆಗೇ ಬೊಗಳ್ತವೆ, ಊಳಿಡ್ತವೆ! ನಿದ್ದೇನೂ ಹಾಳು.

ಇನ್ನು ಹಸುಗಳ ಬಗ್ಗೆ ಮಾತಾಡೋಣ:
ನಾನ್ ಹೊರಡೋದೋ ಕ್ಯಾಬ್ ಗೆ ಇನ್ನೇನ್ 2 ನಿಮಿಷ ಇರ್ಬೇಕು ಅನ್ನೋವಾಗ. 0.5 ಕಿ.ಮೀ. ಓಡ್ಕೊಂಡ್ ಹೋಗ್ಬೇಕು. ಆದ್ರೆ ಈ ಹಸುಗಳು ದಾರಿ ಬಿಡ್ಬೇಕಲ್ಲಾ. ಅಷ್ಟ್ ಬೆಳಗ್ಗೇನೇ ಆವ್ರದ್ದೂ ಹುಲ್ಲ್ ಹುಡುಕೋ ಕೆಲ್ಸಾ ಶುರು ಆಗತ್ತೆ ಅನ್ಸತ್ತೆ. ಅವಕ್ಕೇನು ಕ್ಯಾಬ್ ಮಿಸ್ ಆಗೋ ತಲೆನೋವಾ, ಅವಕ್ಕೆ ಎಷ್ಟ್ ಬೇಕೋ ಅಷ್ಟ್ ನಿಧಾಆಆಆನಕ್ಕೆ ಹೋಗ್ತಿರತ್ವೆ. ಮುಂದೆ ಹೋಗಕ್ಕೆ ದಾರಿ ಬಿಡಲ್ಲ, ಸರಿ ಅವುಗಳ ಬಲಗಡೆಯಿಂದ ಹೋಗೋಣ ಅಂದ್ರೆ ವಾಹನಗಳ ಕಾಟ! ಪಾಪ ನಮ್ ಕ್ಯಾಬ್ ಡ್ರೈವರ್ ಒಳ್ಳೆಯವರು, ನಂದೇ ಮೊದಲ ಪಿಕಪ್ ಆಗಿರೋದಿಂದ ಕಾಯ್ತಾರೆ! ಇಲ್ಲ ಅಂದಿದ್ರೆ ದಿನಾ ಕ್ಯಾಬ್ ಗೆ ಟಾಟಾ ಹೇಳ್ಬೇಕಾಗ್ತಿತ್ತು.

ಅದಕ್ಕೆ ಇನ್ಮೇಲೆ ಹಸುಗಳಿಗೆ traffic rules ಹೇಳ್ಕೊಡ್ಬೇಕು ಹಾಗೂ ಪೋಲೀಸರು ನಾಯಿ ಡಾನ್ ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಅಂತ strike ಮಾಡೋಣ ಅಂತ ಯೋಚಿಸ್ತಿದೀನಿ. ಏನಂತೀರಿ?

Sunday, January 11, 2009

Cinema cinema!

ಕೆಲವು ಸಿನಿಮಾ ನೊಡಿದ್ರೆ, ಯಾಕಾದ್ರೂ ಈ ಸಿನಿಮಾ ಬಿಡುಗಡೆ ಮಾಡಿದ್ರೋ ಅಂತ ಅನ್ಸತ್ತೆ.
ಸಿನಿಮಾ ಕತೆ ಸ್ವಲ್ಪ ಚೆನ್ನಾಗಿದೆ ಅಂತ ಅನ್ಸಿದ್ರೂ ಅದನ್ನ edit ಮಾಡೋರಿಗೆ ಅದ್ರ ಹಣೆಬರಹ ಗೊತ್ತಾಗ್ಬೇಕು ಅಲ್ವಾ?
ಅದೂ ಸರಿ ಇದೆ ಅಂತ ಅನ್ಸಿದ್ರೂ ಆಮೇಲೆ ಅದ್ರ premier show ನೋಡೋವಾಗ ಆದ್ರೂ ಗೊತ್ತಾಗ್ಬೇಕು ಅಲ್ವಾ?
ಆಮೇಲೂ ಅದನ್ನ ಬಿಡುಗಡೆ ಯಾವ್ ಧೈರ್ಯದ ಮೇಲೆ ಮಾಡ್ತಾರೆ ಅನ್ನೋದು ಇವತ್ತಿಗೂ ಅರ್ಥ ಆಗ್ತಿಲ್ಲ!
ನೀವು ಈ ಸಿನಿಮಾಗಳನ್ನು ನೋಡಿದ್ದರೆ ನನ್ನ ಮಾತನ್ನು ಖಂಡಿತಾ ಒಪ್ಪುತ್ತೀರಿ: Jaani Dushman - Ek anokhi kahani, Jaal- The trap, Baaz - A bird in danger, ಮುಂತಾದವು.
ಕೆಲವೊಂದನ್ನ ನೋಡಿದರೆ ತಮಾಷೆ ಅನ್ನಿಸಿದರೆ ಇನ್ನೂ ಕೆಲವನ್ನ ಜೈಲಿನಲ್ಲಿ 3rd degree torture ಅಂತಾರಲ್ಲ, ಅದಕ್ಕೆ ಉಪಯೋಗಿಸಬಹುದು.
ಹೆಚ್ಚಿನ ಸಿನೆಮಾಗಳು ನೆಲಕಚ್ಚಲು ಈ ತರದ ಕಥೆಗಳೇ ಕಾರಣ, ಅಲ್ವಾ?

Saturday, January 3, 2009

ಬೆಂಗಳೂರಿನಲ್ಲಿ ತಿರುಗಾಟ

ಅಮ್ಮ ಬೆಂಗಳೂರಿಗೆ ಬಂದು ನಮ್ಮನೇಲಿ(ನಾವು ೪ ಜನ ಗೆಳತಿಯರು ಆಪಾರ್ಟ್‌ಮೆಂಟಲ್ಲಿ ಬಾಡಿಗೆ ಮನೇಲಿ ಇದ್ದೀವಿ) ನಾಲಕ್ ದಿನ ಇರ್ತೀನಿ ಅಂದಾಗ ಆಕಾಶಕ್ಕೇ ಹಾರ್ ಬಿಡೋಣ ಅನ್ನೋವಷ್ಟು ಸಂತೋಷ ಆಯ್ತು. ನಾನು ಊರಿಗೆ ಹೋಗಿದ್ದಾಗ ಅಮ್ಮ ಮತ್ತೆ ವರುಣ್ ನನ್ ಜೊತೇಲೇ ಬೆಂಗಳೂರಿಗೆ ಬಂದ್ರು. ಅಮ್ಮಂಗೆ ಎಲ್ಲಾ ನೆಂಟರ ಮನೆಗೆ ಹೋಗ್‌ಬೇಕಾಗಿದ್ರೆ ವರುಣ್ ಗೆ ಬೆಂಗಳೂರು ನೋಡ್ಬೇಕು ಅಂತ.
ಸರಿ ಅಂತ ನಾನು ಚಿಕ್ಕಮ್ಮನ್ ಮನೆ, ಮಾವನ್ ಮನೆ, ಕಾರ್ತಿಕ್ ಮನೆ ಇಷ್ಟ್ ಮನೆಗೆ ಹೋಗೋಣ. ಆಮೇಲೆ ಲಾಲ್ ಬಾಗ್, ಕಬ್ಬನ್ ಪಾರ್ಕ್, ಬನ್ನೇರ್ಘಟ್ಟ ಮೃಗಾಲಯ, ವಿಧಾನ ಸೌಧ ಇಷ್ಟೆಲ್ಲಾ ನೋಡೋಣ ಅಂತ ಯೋಚ್ನೆ ಮಾಡ್ದೆ.

ದಿನ ೧: ಆದಿತ್ಯ ವಾರ(28 December 2008)
ಬೆಳಗ್ಗೆ ಗೋಧಿ ದೋಸೆ(ನಾನೇ ಮಾಡಿದ್ದು!) ತಿಂದು ಹೊರಟ್ವಿ. ಊಟಕ್ಕೆ ಎನ್.ಆರ್.ಕಾಲೊನೀ ಲಿದ್ದ ಚಿಕ್ಕಮ್ಮನ್ ಮನೆಗ್ ಹೋದ್ವಿ.
ಅಲ್ಲಿಂದ ಬಸವನ ಗುಡಿ ದೇವಸ್ಥಾನಕ್ಕೆ ಹೋದೆವು. ದೊಡ್ ಬಸವಣ್ಣನ ದರ್ಶನ ಮಾಡಿ ಸ್ವಲ್ಪ ಹೊತ್ತು ಅಲ್ಲೇ ಕಳೆದ್ವಿ.ಹಂಗೆ ಅಲ್ಲೇ ಹತ್ರದಲ್ಲಿ ಇದ್ದ ಕೃಷ್ಣನ ದೇವಸ್ಥಾನ(ಗೋವರ್ಧನ ದೇವಸ್ಥಾನ) ನೋಡಿದ್ವಿ. ಗುಹಾ ದೇವಾಲಯ ತುಂಬಾ ಚೆನ್ನಾಗಿ ಕಟ್ಟಿದಾರೆ. ಒಳಗಡೆ ನೋಡಿದ್ರೆ ಕೃಷ್ಣ ಕಿರು ಬೆರಳಲ್ಲಿ ಇಡೀ ದೇವಸ್ಥಾನಾನೆ(ಕಲ್ಲಲ್ ಕಟ್ಟಿರೋದು) ಎತ್ತಿ ಹಿಡಿಡಿರೋ ಥರ ಇದೆ.


ಆಮೇಲೆ ಲಾಲ್‌ಬಾಗ್ ನೋಡಕ್ ಹೋದ್ವಿ. ಅಷ್ಟೊಂದ್ ಹೂವುಗಳೂ ಇರ್ಲಿಲ್ಲ. ಆದಿತ್ಯಾವಾರ ಆಗಿದ್ರಿಂದ ತುಂಬಾ ಜನ. ಇಡೀ ನೋಡಕ್ ಆಗ್ಲಿಲ್ಲ. ಗಾಜಿನ ಮನೆ ಹಾಗೂ ಕೊಳ ನೋಡ್ಕೊಂಡು ಹೊರಗಡೆ ಬಂದ್ವಿ. ಸುಮ್ನೇ ನಡ್ದು ನಡ್ದು ಸುಸ್ತಾಯ್ತು!ಅಲ್ಲಿಂದ ವಿದ್ಯಾರಣ್ಯಾಪುರಮ್ ಕಡೆ ನಮ್ ಸವಾರಿ ಹೊರಡ್ತು! ಇಲ್ಲಿ ತನಕ ಆಟೋದವ್ರ ಹತ್ರ ಜಗಳ ಆಡಿ ಸಾಕಾಗಿತ್ತು. ಅದಕ್ಕೆ ನಗರ ಸಾರಿಗೆ ಬಸ್ಸುಗಳಲ್ಲಿ ಆರಾಮಾಗಿ ಹೋದ್ವಿ! ಅಲ್ಲಿಗ್ ಹೋದ್ರೆ ಮಾವನ್ ಮನೇಲಿ(ಸೋದರ ಮಾವನ ಮನೆ, ಬೇರೆ ಅಂತ ತಪ್ಪಾಗಿ ಭಾವಿಸಬಾರದಾಗಿ ವಿನಂತಿ) ಗಡದ್ದಾಗಿ ಊಟ, ಸೂಪರ್ ಆಗಿ ನಿದ್ದೆ!!

ದಿನ ೨: ಸೋಮವಾರ(29th December 2008)
ಬೆಳಗ್ಗೆ ಎದ್ದು ತಿಂಡಿ(ಚಪಾತಿ) ತಿಂದು ಹೆಬ್ಬಾಳದಲ್ಲಿರೋ ಕಾರ್ತಿಕ್(my someone special) ಮನೆಗ್ ಹೋದ್ವಿ. ಅಮ್ಮ ಅವ್ನನ್ನ ನೋಡಿರ್ಲಿಲ್ಲ, ಹಾಗೇ ಅವ್ನ್ ಅಪ್ಪ ಅಮ್ಮನ್ನೂ ಪರಿಚಯ ಮಾಡ್ಬೇಕು ಅಂತ ಅಲ್ಲಿಗ್ ಹೋಗೋ ಪ್ಲಾನು ಮಾಡಿದ್ದು. ಅಲ್ಲಿಗ್ ಹೋದ್ ಕೂಡ್ಲೇ, ತಿಂಡಿ ತಿನ್ನಿ ಅಂತ ಒತ್ತಾಯ ಮಾಡಿ ದೋಸೆ ಹಾಕ್ ಕೊಟ್ರು(ಎರಡನೇ ಬಾರಿ ಉಪಹಾರ!). ಅದೇ ಆಪಾರ್ಟ್‌ಮೆಂಟಲ್ಲಿ ಕಾರ್ತಿಕ್ ಅಕ್ಕನ ಮನೆ ಇತ್ತು, ಅಲ್ಲಿಗ್ ಹೋದ್ರೆ ಮತ್ತೆ ಕಾಫಿ ಮಾಡಿದ್ರು. ಅಷ್ಟೇ ಸಾಲ್ದು ಅಂತ ಅದೇ ಆಪಾರ್ಟ್‌ಮೆಂಟಲ್ಲಿ ಅಕ್ಕನ ನೆಂಟರ ಮನೆ ಇನ್ನೊಂದಿತ್ತು, ಆವ್ರು ಒರಿಸ್ಸಾದವರು. ಮಾನೆಗ್ ಕರ್ಕೊಂಡ್ ಹೋಗಿ ಮತ್ತೆ ಕಾಫಿ, ಇನ್ನೂ ಒರಿಸ್ಸಾದ ಸಿಹಿ ತಿಂಡಿಗಳನ್ನು ತಂದು ನಮ್ ಮುಂದೆ ಇಟ್ರು. ಅದನ್ನ ತಿಂದಾಗ ಹೊಟ್ಟೆ ಇನ್ನೆರಡು ದಿನ ನಂಗೇನೂ ಬೇಡ ಅಂತ ಮುಷ್ಕರ ಶುರು ಮಾಡಿತ್ತು!
ಆಮೇಲೆ ಊಟಾನೂ ಅಲ್ಲೇ ಮಾಡಿ, ನಕ್ಷತ್ರಾಲಯ(planetarium) ನೋಡೋಣ ಅಂತ ಹೋದ್ರೆ ಸೋಮವಾರ ರಜಾ ದಿನ ಅನ್ನೋ ಬೋರ್ಡು! ಸರಿ, ಅಲ್ಲೇ ಮುಂದೆ ಸಂಗೀತ ಕಾರಂಜಿ ನೋಡೋಣ ಅಂತ ರಸ್ತೆ ದಾಟಿದ್ರೆ ಅದಕ್ಕೂ ಸೋಮವಾರ ರಜೆ! ಆಮೇಲೆ ಅಲ್ಲಿಂದ forum ಕಡೆ ಬರ್ತಾ, ಕಬ್ಬನ್ ಪಾರ್ಕ್, ವಿಧಾನ ಸೌಧ ಎಲ್ಲಾ ಹೊರಗಡೆಯಿಂದ ನೋಡಿದ್ವಿ. Museum ನೋಡೋಣ ಅಂತ ಒಂದ್ ಸರ್ತಿ ಯೋಚ್ನೆ ಮಾಡಿದ್ವಿ, ಆದ್ರೆ ಅದಕ್ಕೂ ಸೋಮವಾರಾನೇ ರಜೆ ಅಂತೆ! ಅದಕ್ಕೆ forum ನೋಡಕ್ ಬಂದ್ವಿ. ಅಲ್ಲಿ ಕ್ರಿಸ್ಮಸ್ ಗಲಾಟೆ!

Forum ಎಲ್ಲಾ ನೋಡಿದ್ ಮೇಲೆ ಅಮ್ಮನ್ನ ಮನೇಲಿ ಬಿಟ್ ಬಂದ್ವಿ. ನಂತ್ರ ಶುರುವಾಯ್ತು laptop ಹುಡುಕಾಟ!
ಒಂದೊಂದೇ ನೊಡ್ತಾ ಹೋದ್ರೆ, ಪ್ರತಿಯೊಂದೂ ಮುಂಚೀನದಕ್ಕಿಂತ ಚೆನ್ನಾಗ್ ಕಾಣಿಸತ್ತೆ. ಕೊನೆಗೂ ವರುಣ್ acer 5920 ತೆಗೊಳ್ಳೋದು ಅಂತ ನಿರ್ಧಾರ ಮಾಡ್ದ. ಆದ್ರೆ ಮನೇಲಿ ಒಂದ್ ಸರ್ತಿ ಕೇಳಿ ನಾಳೆನೇ ತೆಗೊಳ್ಳೋದು ಅಂತ ಮಾತಾಯ್ತು. ಸರಿ ಇನ್ನೇನು, ಮನೇಗ್ ಹೋಗಿ ಅನ್ನ, ಸಾರು ಮತ್ತು ಬೀಟ್ ರೂಟ್ ಪಲ್ಯ ಮಾಡಿ ತಿಂದು ಮಲಕ್ಕೊಂಡ್ವಿ.

ದಿನ ೩: ಮಂಗಳವಾರ(30th December)
ಎದ್ದಾಗ ನಾವು ಅಂದ್ಕೊಂಡಿದ್ದು, ಬನ್ನೇರ್ಘಟ್ಟಕ್ಕೆ ಹೋಗಿ ದಿನ ಎಲ್ಲಾ ಅಲ್ಲೇ ಕಳೆಯೋದು, ಸಂಜೆ laptop ಖರೀದಿ ಮಾಡಿ ಹುಬ್ಬಳ್ಳಿ ಬಸ್ ಹಿಡಿಯೋದು ಅಂತ. ನಮ್ ಆಫೀಸ್ ಹೆಂಗೀದ್ರೂ ದಾರೀಲೇ ಬರತ್ತಲ್ವಾ ಅಂತ ಅಮ್ಮನ್ನೂ, ವರುಣ್ ಅನ್ನೂ ಆಫೀಸ್ ಗೆ ಕರ್ಕೊಂಡ್ ಹೋದೆ.
ಆಮೇಲೆ ಬನ್ನೇರ್ಘಟ್ಟ ಬಸ್ ಹತ್ಟಿದ್ ಕೂಡ್ಲೇ ಬಸ್ ಕಂಡಕ್ಟರ್ ಅಂದ್ರು "ಇವತ್ತು national park ಗೆ ರಜಾಮ್ಮ. ಇಲ್ಲೇ ಹತ್ರ ಮೀನಕ್ಷಿ ಸುಂದರೇಶ್ವರ temple ಇದೆ. ಬಸ್ ಹತ್ಟಿದೀರಾ, temple ಆದ್ರೂ ನೋಡ್ಕೊಂಡ್ ಹೋಗಿ. ಸರಿ ಅಂತ ದೇವಸ್ಥಾನಕ್ ಹೋದ್ವಿ. ದೊಡ್ಡ ದೇವಸ್ಥಾನ. ಇನ್ನೂ ಪೂರ್ತಿಯಾಗಿಲ್ಲ. ಆದ್ ಮೇಲೆ ನೋಡಕ್ ಚೆನ್ನಾಗಿರತ್ತೆ ಅನ್ಸತ್ತೆ.
ಆಮೇಲೆ ಇನ್ನೇನ್ ಮಾಡೋದು ಅಂತ ಯೋಚ್ನೆ ಮಾಡ್ತಾ ಇದ್ದಾಗ museum ಕಡೇನೆ ಹೋಗಾಣ ಅಂತ ಅಂದ್ಕೊಂಡ್ ಹೊರಟ್ವಿ. ಕಾರ್ಪೋರಶನ್ ಅಲ್ಲಿ ಇಳ್ದು ಆಟೋದವರತ್ರ ಬರ್ತೀರಾ ಅಂತ ಕೇಳಿದ್ರೆ ಯಾರೂ ಬರ್ಲಿಲ್ಲ! ಇನ್ನೇನ್ ಮಾಡಕ್ಕಾಗತ್ತೆ, 1.5 ಕಿ.ಮೀ.ನಡ್ಕೊಂಡ್ ಹೋದ್ವಿ!
museum is really amazing. ನಿಜ್ವಾಗ್ಲೂ ತುಂಬಾ ತುಂಬಾ ಚೆನ್ನಾಗಿದೆ. ಚೆನ್ನಾಗೇ maintain ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ವಿಜ್ಞಾನದ ಪರಿಕಲ್ಪನೆಗಳನ್ನ(concepts) ಅರ್ಥ ಮಾಡ್ಕೊಳ್ಳಕ್ಕೆ ಒಳ್ಳೇ ಜಾಗ. ಆದ್ರೆ ಎಲ್ಲರೂ ಪ್ರತಿಯೊಂದೂ switch ಅನ್ನ ಅಮುಕಿ ಅಮುಕಿ ಹಾಳ್ ಮಾಡ್ತಿದಾರೆ. ಒಂದಷ್ಟು ಜನ ಅಲ್ಲೇ ಇದ್ದು ಎಲ್ಲಾನೂ ವಿವರಿಸಿ ಹೇಳೋ ಹಾಗಿದ್ರೆ ಇನ್ನೂ ಚೆನ್ನಾಗಿರ್ತಿತ್ತು. ಹೆಚ್ಚಿನ ಎಲ್ಲಾ ತರದ ಯಂತ್ರಗಳು ಹೇಗೆ ಕೆಲ್ಸಾ ಮಾಡತ್ವೆ ಅನ್ನೋದನ್ನ ಇಲ್ಲಿ ನೋಡ್ಬಹುದು. ಇನ್ನೊಂದಿನ ಇಡೀ ದಿನ ಅಲ್ಲೇ ಇರೋ ಹಾಗೆ ಹೋಗಿ ಎಲ್ಲವನ್ನ ಸರಿಯಾಗಿ ನೋಡ್ಬೆಕು. museum terrace ಇಂದ ವಿಜಯ್ ಮಲ್ಯ ಅವರ U.B. city ನೋಡಿದ್ರೆ ಎಲ್ಲೋ ಅಮೇರಿಕಕ್ಕೆ ಬಂದಿದೀವೇನೋ ಅಂತ ಅನಿಸ್ತಿತ್ತು.

ಆಮೇಲೆ ಅಲ್ಲಿಂದ ಹೊರಟು ಮತ್ತೆ ಕೋರಮಂಗಲಕ್ಕೆ ಬರೋವಾಗ ರಾತ್ರಿ 7 ಆಗಿತ್ತು. ವರುಣ್ laptop ಖರೀದಿ ಮಾಡಿ ಮನೆ ತಲುಪುವಾಗ 8. ಬೇಗ ಬೇಗ ಹೊರಟು majestic ಬಂದಾಗ 9.30 ಆಗಿತ್ತು. ಅಲ್ಲಿ ಕಾಮತ್ ಹೋಟ್ಲಲ್ಲಿ ಊಟ ಮಾಡಿ 11 ಕ್ಕೆ ಹುಬ್ಬಳ್ಳಿ ಬಸ್ ಹತ್ತಿದ್ ಕೂಡ್ಲೇ ನಿದ್ದೆ.

ಇಲ್ಲಿಗೆ ದಿನದ ಅಮ್ಮನ ಬೆಂಗಳೂರು ಸವಾರಿ ಮುಗಿದಿತ್ತು. ಹಾಗೆ ನನ್ನ ಹುಬ್ಬಳ್ಳಿ trip ಶುರುವಾಯ್ತು :-).