Monday, February 12, 2018

ಶ್ರೀ ಹರ್ ಮಂದಿರ್ ಸಾಹೇಬ್ (ಗೋಲ್ಡನ್ ಟೆಂಪಲ್)

ರಂಗ್ ದೇ ಬಸಂತಿ(2006) ಸಿನಿಮಾದಲ್ಲಿರೋ ಇಕ್ ಓಂಕಾರ್ ಹಾಡು ನೋಡಿದಾಗ, ಆ ಜಾಗ ಯಾವ್ದು ಅಂತ ಗೊತ್ತಾಗ್ದೇ ಇದ್ರೂ ಅಲ್ಲಿಗೆ ಹೋಗ್ಬೇಕು ಅನ್ನೋ ಆಸೆ ಹುಟ್ಟಿತ್ತು. ಆಮೇಲೆ ಅದು ಗೋಲ್ಡನ್ ಟೆಂಪಲ್, ಸಿಖ್ ಸಮುದಾಯದವರಿಗೆ ಅತ್ಯಂತ ಮುಖ್ಯವಾದ ಪವಿತ್ರ ಕ್ಷೇತ್ರ ಅಂತ ಗೊತ್ತಾಯ್ತು.  ಒಂದ್ ಸರ್ತಿ ಆದ್ರೂ ಅಲ್ಲಿಗೆ ಹೋಗಿ ಬರ್ಬೇಕು ಅಂತ ಅಷ್ಟು ವರ್ಷಗಳಿಂದ ಆಸೆ  ಇತ್ತು.

ಪ್ರತೀ ವರ್ಷ ಕ್ರಿಸ್ಮಸ್ ಸಮಯದಲ್ಲಿ ನಮ್ಮ ಆಫೀಸಿನಲ್ಲಿ  ಒಂದು ವಾರದ ರಜೆ ಇರತ್ತೆ ಅಂತ ಗೊತ್ತಿದ್ರೂ ಯಾವತ್ತೂ ಏನೂ ಪ್ಲಾನ್ ಮಾಡಿಲ್ಲ, ಕೊನೇ ಕ್ಷಣದಲ್ಲಿ ಏನು ತೋಚತ್ತೋ ಅದೇ ಮಾಡೋದು.  ನೋಡ್ತಾ ನೋಡ್ತಾ ಈ ವರ್ಷನೂ ಡಿಸೆಂಬರ್(2017) ಬಂದೇ ಬಿಡ್ತು.  ರಜಾ ಶುರು ಆಗೋ 2 ದಿನ ಮೊದಲು ಅಲ್ಲಿಗೇ ಹೋಗೋದು, ಟಿಕೆಟ್ ಸ್ವಲ್ಪ ಹೆಚ್ಚಾದ್ರೂ ಪರವಾಗಿಲ್ಲ ಅಂತ ಅಮೃತಸರಕ್ಕೆ ಸಿಕ್ಕಿದ್ ವಿಮಾನ ಬುಕ್ ಮಾಡ್ದೆ. ಅಲ್ಲಿ ಗೋಲ್ಡನ್ ಟೆಂಪಲ್ ಹತ್ರ ಒಂದು ಹೋಟೆಲ್ ಅಲ್ಲಿ ರೂಮ್ ಬುಕ್ ಮಾಡ್ದೆ.

20 ಡಿಸೆಂಬರ್ಬೆ, ಳಗ್ಗೆ 8.30ಗೆ ವಿಮಾನ,  ಅಮೃತ್ ಸರ್ ತಲುಪಿದ್ದು ಸುಮಾರು 1.45-2. ಅಲ್ಲಿಂದ airport ಟ್ಯಾಕ್ಸಿ ಬುಕ್(ಓಲಾ ಬುಕ್ ಮಾಡಿದ್ರೆ ಕಮ್ಮಿ ಆಗತ್ತೆ ಅಂತ ಆಮೇಲೆ ಗೊತ್ತಾಯ್ತು) ಮಾಡಿ ಹೋಟೆಲ್ ಕಡೆ ಹೊರಟೆ. ಟ್ಯಾಕ್ಸಿ ಡ್ರೈವರ್ ವಾಘಾ ಬಾರ್ಡರ್ ನೋಡಕ್ಕೆ ಹೋಗ್ಬೇಕಾ ಅಂತ ಕೇಳ್ದ. ಎಷ್ಟಾಗತ್ತೆ ಅಂದ್ರೆ  ಪಂಜಾಬಿಲಿ ಎಷ್ಟೋ ಹೇಳ್ದ, ಮತ್ತೆ ಕೇಳಿದ್ದಕ್ಕೆ ಅಲ್ಲಿಗೆ ಹೋಗಿ ಬರಕ್ಕೆ 1800 ಆಗತ್ತೆ, ನೀವು ನಂಗೆ ಸಿಸ್ಟರ್ ಥರ, ಸೇಫ್ ಆಗಿ ಕರ್ಕೊಂಡು ಹೋಗಿ ಬರ್ತೀನಿ, ಹೋಗ್ಬೇಕು ಅಂದ್ರೆ ಈಗ್ಲೇ ಹೊರಡ್ಬೇಕು, ಇಲ್ಲ ಅಂದ್ರೆ ಅಲ್ಲಿ ಜಾಗ ಸಿಗಲ್ಲ ಅಂತೆಲ್ಲ ಹೇಳ್ತಾ ಇದ್ದ.  ಗೋಲ್ಡನ್ ಟೆಂಪಲ್ ನೋಡಕ್ಕೋಸ್ಕರನೇ ಬಂದಿರೋ ಕಾರಣ ಮೊದಲು ಅಲ್ಲಿಗೇ ಹೋಗೋದು,  ಆಮೇಲೆ ಸಮಯ ಸಿಕ್ಕಿದ್ರೆ ಬೇರೆ ಜಾಗಕ್ಕೆ ಹೋಗೋದು ಅಂತ ನಾನು ಮನ್ಸಲ್ಲೇ ಅಂದ್ಕೊಂಡೆ.

ಅಲ್ಲೂ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್, forget God, traffic jam is everywhere ಅಂತ ಅನ್ಸಿದ್ದು ನಿಜ! ಅಂತೂ ಹೋಟೆಲ್ ತಲುಪಿದ್ದು 2.30ಗೆ. ಬೇಗ ಬೇಗ ಹೊರಟು ಟೆಂಪಲ್ ಕಡೆ ಹೋದೆ, ಇನ್ನೂ ಊಟ ಮಾಡಿರ್ಲಿಲ್ಲ ಆದ್ರೆ ಅಲ್ಲಿಗೆ ಹೋಗೋ ಖುಷಿಗೆ ಹೊಟ್ಟೆ ಹಸಿತಾ ಇರ್ಲಿಲ್ಲ.

ದೇವಸ್ಥಾನದ ಒಳಗೆ ಕಾಲಿಟ್ಟ ತಕ್ಷಣ ಖುಷಿ ಆಯ್ತು. 


ದೇವಸ್ಥಾನದ ವಿಸ್ತೀರ್ಣ ಹೆಚ್ಚು ಕಮ್ಮಿ 1sqkm ಇದೆ. ಅಲ್ಲಿ ಅಮೃತ ಸರೋವರ ಅನ್ನೋ ಕೊಳದ ಮಧ್ಯ ಎರಡು ಮಹಡಿ ಗರ್ಭಗುಡಿ ಇದೆ, ಅದಕ್ಕೆ ಚಿನ್ನದ ಹೊದಿಕೆ ಹಾಕಿದ್ದಾರೆ.  ಈ ಕೊಳದಲ್ಲಿ ಮುಳುಗು ಹಾಕಿದರೆ ಚರ್ಮ ರೋಗಗಳು ವಾಸಿಯಾಗತ್ತೆ ಎನ್ನುವ ನಂಬಿಕೆ ಇದೆ. 

ಅಲ್ಲಿ ನಿಧಾನಕ್ಕೆ ಹೋಗಿ, ಗರ್ಭಗುಡಿ ಹೋಗುವ ಸಾಲಿನಲ್ಲಿ ನಿಂತೆ.  ಅಲ್ಲಿ ಗುರ್ಬಾನಿ  ಹಾಡ್ತಾ ಇರ್ತಾರೆ.  ಗರ್ಭಗುಡಿ ಸುತ್ತ ಹಾಗೂ ಮಹಡಿಗಳಲ್ಲಿ ಎಷ್ಟು ಹೊತ್ತು ಬೇಕಾರೂ ಕೂತ್ಕೊಬಹುದು. ನಾನು ಸುಮಾರು ಒಂದು ಗಂಟೆ ಅಲ್ಲೇ ಕೂತಿದ್ದು ಹೊರಗಡೆ ಬಂದೆ, ಮತ್ತೆ ಆ ಕೆರೆ ಪಕ್ಕ ಇನ್ನೂ ಸುಮಾರು ಹೊತ್ತು ಕೂತಿದ್ದು 5 ಗಂಟೆ ಹಂಗೆ ಊಟ ಮಾಡಕ್ಕೆ ಹೋದೆ.

ಅಲ್ಲಿ 24 ಗಂಟೇನೂ ಊಟದ ವ್ಯವಸ್ಥೆ ಇದೆ, ಎಲ್ಲಾರು ಸ್ವಯಂ ಸೇವಕರು. ರುಚಿಯಾದ ಊಟ ಮಾಡಿ, ಮತ್ತೆ ದೇವಸ್ಥಾನದ ಒಳಗೆ ಹೋದೆ. ಅಲ್ಲಿಂದ ಹೊರಗಡೆ ಹೋಗೋ ಮನಸ್ಸೇ ಬರ್ತಿರ್ಲಿಲ್ಲ. ದೇವಸ್ಥಾನ ರಾತ್ರಿ ಹೊತ್ತು ಇನ್ನೂ ಸುಂದರವಾಗಿ ಕಾಣತ್ತೆ

ಆದರೆ ಕೊರೆಯೋ ಛಳಿ ಶುರುವಾಯ್ತು, ಅಲ್ಲಿಂದ ಹೊರಡಲೇ ಬೇಕಾಯ್ತು.  ಹೆಚ್ಚು ಕಮ್ಮಿ 3 ಗಂಟೆ ಅಲ್ಲೇ ಕೂತಿದ್ದರೂ ಅದೂ ಕಮ್ಮಿ ಅನ್ಸತ್ತೆ. 
 
ಬೆಳಗ್ಗೆ ಮತ್ತೆ ಟೆಂಪಲ್ ಸುತ್ತ  ಒಂದು ಸುತ್ತು ಹಾಕಿ, ಅಲ್ಲಿಂದ ಜೈಪುರಕ್ಕೆ ವಿಮಾನ ಬುಕ್ ಮಾಡಿದ್ದ  ಕಾರಣ ಬೆಳಗ್ಗೆ  ಬೆಳಗ್ಗೆ 11 ಕ್ಕೆ ಮತ್ತೆ ಅಮೃತಸರ ವಿಮಾನ ನಿಲ್ದಾಣಕ್ಕೆ ಹೊರಡಲೇ ಬೇಕಾಯಿತು. ಆದರೆ ಹೊರಡಕ್ಕೆ ಮುಂಚೆ ಮುಂದಿನ ಸರ್ತಿ ಬರುವಾಗ ಇನ್ನೂ ಹೆಚ್ಚಿನ ಸಮಯ ಅಲ್ಲೇ ಇರುವ ಹಾಗೆ ಬುಕ್ ಮಾಡ್ಬೇಕು ಅಂತ ನಿರ್ಧಾರ ಮಾಡಿ ಹೊರಟೆ. 

ನೀವು ಹೋಗಿದೀರಾ ಅಲ್ಲಿಗೆ? ನಿಮಗೆ ಹೇಗನಿಸಿತು? 


Monday, May 29, 2017

ಊಟ ಮಾಡದ ಹುಡುಗಿ!

ನಾನು ಕೆಲಸಕ್ಕೆ ಸೇರಿದ ಹೊಸತು, ಅಲ್ಲಿ ಇರೋರ ಪರಿಚಯ ಎಲ್ಲ ಹೇಳಿ ಆದ ಮೇಲೆ ಆಗ ನನ್ನ ಟೀಮ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ರು "ನಿಮ್ಮ ಕಡೆ ಯಾರೋ ಊಟ ಮಾಡದ ಹುಡುಗಿ ಇದ್ದಾಳಂತೆ, ಹೌದಾ" ಅಂತ ಕೇಳಿದ್ರು.

ಅದು ನಾನೇ !

ನಾನು ಬಾಲವಾಡಿ ಹೋಗ್ತಾ ಇದ್ದಾಗ ಒಂದು ಸರ್ತಿ ಜ್ವರ ಬಂದಿತ್ತು, ತಿಂದಿದ್ದೆಲ್ಲಾ ವಾಂತಿ ಆಗ.  ಜ್ವರ ಬಿಟ್ ಮೇಲೆ ಏನು ತಿನ್ನಕ್ಕೂ ಭಯ,  ಎಲ್ಲಿ ಮತ್ತೆ ವಾಂತಿ ಆಗ್ಬಿಡತ್ತೋ ಅಂತ.  ಅಷ್ಟೇ, ಇದೇ ಕಾರಣಕ್ಕೆ ಅನ್ನ ಊಟ ಮಾಡೋದೇ ಬಿಟ್ಬಿಟ್ಟೆ.

ಹೊಟ್ಟೆ ತುಂಬಾ ಹಾಲು ಕುಡಿಯೋದು ಅಭ್ಯಾಸ ಆಯ್ತು. ದೋಸೆ, ಚಪಾತಿ ತಿಂತಾ ಇದ್ದೆ ಅವಾಗ, ಆದ್ರೆ ಅದೂ ಜಾಸ್ತಿ ದಿನ ನಡೀಲಿಲ್ಲ. 3-4 ಕ್ಲಾಸು ಹೋಗೋವಾಗ ಬೇಜಾರು ಬಂತು, ಅದೂ ಬಿಟ್ಟೆ.  ದೋಸೆ ತಿನ್ಬೇಕು ಅಂದ್ರೆ ಅದು ತುಂಬಾ ತೆಳ್ಳಗೆ ಮಾಡಿ, ಚೆನ್ನಾಗಿ ಆರಿಸಿ ಕೊಡ್ಬೇಕು. ಅದ್ರಲ್ಲೂ ದಪ್ಪ ಇರೋ ತುಂಡು ಹಸು-ಕರುಗಳಿಗೆ ಸೇರ್ತಿತ್ತು (ಅಮ್ಮಂಗೆ ಗೊತ್ತಾಗ್ದೆ ಇರೋ ಹಾಗೆ).

ಇದೆಲ್ಲ ಶುರು ಆಗೋ ಮುಂಚೆ ನಾನು ತುಂಬಾ ಚೆನ್ನಾಗಿ ಊಟ ಮಾಡ್ತಿದ್ದೆ ಅಂತೆ, ಅದಕ್ಕೆ ಯಾರದ್ದೋ ದೃಷ್ಟಿ ಆಗಿದೆ ಅಂತ ದೃಷ್ಟಿ ತೆಗೆದ್ರು. ಡಾಕ್ಟರ್ ಹತ್ರ ಕರ್ಕೊಂಡು ಹೋದ್ರು, ಅವರು ಹುಡುಗಿ ಉದ್ದ, ತೂಕ ಎಲ್ಲಾ ಸರಿ ಇದೆ, ಯಾಕೆ ಸುಮ್ನೆ ಯೋಚನೆ ಮಾಡ್ತೀರಾ ಅಂತ ಹೇಳಿ ಕಳಿಸಿದ್ರು!

ಇನ್ನೊಬ್ರು ಅವಳಿಗೆ ಒಂದು ದಿನ ಹಾಲು ಕೊಡ್ಬೇಡಿ, ಅವಾಗ ಹಸಿವಾಗಿ ಊಟ ಮಾಡೇ ಮಾಡ್ತಾಳೆ ಅಂತ ಐಡಿಯಾ ಕೊಟ್ರು. ಹಾಲಿನ ಪಾತ್ರೆ ಕೆಳಗಡೆ ಇದ್ರೆ ನಾನೇ ಲೋಟಕ್ಕೆ ಹಾಕಿಕೊಂಡು ಕುಡೀತಿದ್ದೆ ಅಂತ, ಅದು ನನಗೆ ಎಟಕದೆ ಇರೋ ಅಷ್ಟು ಮೇಲೆ ಇಟ್ಟಿದ್ರು. ನಾನೋ ಹಠಮಾರಿ, ಹಾಲು ಬಿಟ್ಟು ಬೇರೇನೂ ತಿನ್ನಲ್ಲ ಅಂತ ಸುಮ್ನೆ ಕೂತುಬಿಟ್ಟಿದ್ದೆ ಅವತ್ತು. ಅಮ್ಮಂಗೆ ಪಾಪ ನಾನು ಉಪವಾಸ ಇರೋದು ನೋಡಕ್ಕಾಗ್ಲಿಲ್ಲ. ಮತ್ತೆ ಹಾಲಿನ ಪಾತ್ರೆ ಕೆಳಗೆ ಬಂತು :-)

ಅವಾಗ ದಿನದ ಊಟ ಅಂದ್ರೆ, ಬೆಳಗ್ಗೆ ಒಂದು ದೊಡ್ಡ ಲೋಟ ಹಾಲು, ಶಾಲೆಗೆ ಹೋಗೋ ಮುಂಚೆ ಒಂದು ದೊಡ್ಡ ಲೋಟ ಕಾಫಿ(ಹಾಲು ಕಾಫಿ ಅನ್ನೋ ಹಾಗಿತ್ತು ಅದು). ಮಧ್ಯಾಹ್ನ ಮತ್ತೆ ಮನೆಗೆ ಬಂದು ಇನ್ನೊಂದು ದೊಡ್ಡ ಲೋಟ ಹಾಲು. ಸಾಯಂಕಾಲ ಮತ್ತೆ ಕಾಫಿ, ಜೊತೆಗೆ ಸ್ವಲ್ಪ ಕರುಮ್ ಕುರುಮ್ ತಿಂಡಿ. ದಿನಾ ಅಮ್ಮ ಪೂಜೆ ಮಾಡಿ ದೇವರಿಗೆ ನೈವೇದ್ಯ ಮಾಡಿದ್ದ ಹಾಲು ನಂಗೇ ಕೊಡ್ತಾ ಇದ್ರೂ ರಾತ್ರಿ.

ನಂಗೆ ಮಿಡಿ ಉಪ್ಪಿನಕಾಯಿ, ಮಜ್ಜಿಗೆ ತುಂಬಾ ಇಷ್ಟ ಇತ್ತು. ಸೌತೆಕಾಯಿ ಸಾಂಬಾರ್ ಮಾಡಿದ್ರೆ ಹೋಳು ತಿನ್ನೋಕ್ಕೆ ಇಷ್ಟ ಇತ್ತು. ಅದರ ಮಧ್ಯ ಅನ್ನದ ಅಗುಳು ಇತ್ತು ತಿನ್ಸೋ ಐಡಿಯಾ ಮಾಡಿದ್ರು ಅಮ್ಮ. ನಾನು ಅದ್ರಲ್ಲಿ ಅನ್ನದ ಅಗುಳನ್ನು ಎತ್ತಿಟ್ಟು, ಬರೀ ಉಪ್ಪಿನಕಾಯಿ/ಹೋಳುತಿಂದಿದ್ರಿಂದ ಅದೂ ವ್ಯ ರ್ಥ ಪ್ರಯತ್ನ ಆಗೋಯ್ತು.
 
9 ನೇ ಕ್ಲಾಸ್ ತನಕ ಇದೇ ಕತೆ,  ಆಮೇಲೆ  10ನೇ ಕ್ಲಾಸ್ ಅಲ್ಲಿ ಎಲ್ಲರೂ ಡಬ್ಬಿ ತರ್ಬೇಕು ಅನ್ನೋ ನಿಯಮ ಬಂತು. ಅವಾಗ ದಿನಾ ಸಿಹಿ ಅವಲಕ್ಕಿ ತೆಗೊಂಡ್ ಹೋಗಕ್ಕೆ ಶುರು ಮಾಡ್ದೆ. ಸ್ವಲ್ಪ ದಿನಕ್ಕೆ ಆ ನಿಯಮ ಹೋಯ್ತು, ಮತ್ತೆ ಮನೆಗೆ ಹೋಗಿ ಹಾಲು ಕುಡಿಯೋದು ಶುರು ಆಯಿತು, ಹಂಗೇ 10ನೇ ಕ್ಲಾಸ್ ಮುಗೀತು.  ಇನ್ನು ಮುಂದೆ ಪಿ.ಯು. ಕಾಲೇಜು,  ಇದ್ದಿದ್ದು  3 ಕಿ.ಮೀ. ದೂರ. ಮಧ್ಯಾಹ್ನ ಮನೆಗೆ ಬಂದು ಹೋಗೋದು ಸಾಧ್ಯ ಇರ್ಲಿಲ್ಲ. ಅಮ್ಮಂಗೆ ಮಧ್ಯಾಹ್ನ ಊಟದ್ದೇ ಚಿಂತೆ. ಅದಕ್ಕೇ ಒಂದು ಕಂಡೀಷನ್ ಹಾಕಿದ್ರು, ಊಟ ಮಾಡ್ದೆ ಇದ್ರೆ ಪಿ.ಯು. ಕಾಲೇಜು ಕಳ್ಸಲ್ಲ ಅಂತ.

ಆದ್ರೂ ನಂಗೆ ಊಟ ಮಾಡಕ್ಕೆ ಹೋದ್ರೆ ಎಲ್ಲಿ ವಾಂತಿ ಆಗ್ಬಿಡತ್ತೋ ಅನ್ನೋ ಭಯ! ಅದನ್ನ ಹೋಗ್ಸಕ್ಕೆ ಅಂತ ಆಸ್ಪತ್ರೆ ಸೇರ್ಸಿದ್ರು ಅವಾಗ!! ಈಗ ನೆನಪಿಸ್ಕೊಂಡ್ರೂ ನಗು ಬರತ್ತೆ. ನರ್ಸ್ಗಳೆಲ್ಲ ಬಿ.ಪಿ. ನೋಡಕ್ಕೆ ಬಂದಾಗ ಇಲ್ಲಿ ಯಾರು ಪೇಷಂಟ್ ಅಂತ ಆಶ್ಚರ್ಯದಿಂದ ನೋಡ್ತಾ ಇದ್ರು. ಆಮೇಲೆ ಬಂದ್ರು ಡಾಕ್ಟರ್,  ಅವ್ರು ಹಿಪನೊಟೈಜ್ ಮಾಡಕ್ಕೆ ಪ್ರಯತ್ನ ಪಟ್ರು. ಕಣ್ಣ್ ಮುಚ್ಕೋ, ಇವಾಗ ನೀನು ಹಿಂದೆ ಹಿಂದೆ ಹೋಗ್ತಿದೀಯಾ, ಈಗ ನಿಂಗೆ 5 ವರ್ಷ, ಬೀಚ್ ಅಲ್ಲಿ ಓಡ್ತಿದೀಯಾ ಅಂತ ಏನೇನೋ ಹೇಳಿದ್ರು,   ಅದೇನೂ ಕಾಣಿಸ್ದೆ ಇದ್ರೂ ಭಯಕ್ಕೆ ಅವರು ಹೇಳಿದ್ದಕ್ಕೆಲ್ಲ ಹೂಂ ಅಂದಿದ್ದೆ ನಾನು.

ಅಷ್ಟೆಲ್ಲ ಆದ್ಮೇಲೆ  ಅದೇನೋ ಇಂಜೆಕ್ಷನ್  ಕೊಟ್ಟು, ಇನ್ನು ನಿಂಗೆ ಏನೇ ತಿಂದ್ರೂ ವಾಂತಿ ಆಗಲ್ಲ ಅಂತ ಹೇಳಿದ್ ಮೇಲೇನೆ ಊಟ ಮಾಡಕ್ಕೆ ಶುರು ಮಾಡಿದ್ದು  :-D
  

Wednesday, March 29, 2017

ಪರೀಕ್ಷೆಲಿ ನಕಲು ಮಾಡಿದ್ದು !

ಪರೀಕ್ಷೆಲಿ ಕಾಪಿ ಯಾರ್ ಮಾಡಲ್ಲ ಹೇಳಿ! ಇದು ತುಂಬಾ ಹಳೆ ಕತೆ, ಒಂದಾನೊಂದು ಕಾಲದಲ್ಲಿ ಅಂತ ಶುರು ಮಾಡ್ಬಹುದೇನೋ.

ನಾನಾಗ 4 ನೇ ತರಗತಿಯಲ್ಲಿದ್ದೆ, ಎಲ್ಲಾ ವಿಷಯಗಳೂ ಚೆನ್ನಾಗೇ ಓದ್ತಾ ಇದ್ದೆ. ಯಾವಾಗ್ಲೂ 2-3 ರಾಂಕ್!
ಆದ್ರೆ  ನೀತಿ ಬೋಧೆ(moral science ಗೆ ಕನ್ನಡದಲ್ಲಿ ಏನಂತಿದ್ವಿ ಅಂತ ಸತ್ಯವಾಗಿಯೂ ನೆನಪಿಲ್ಲ, ಇದೇ ಇರ್ಬಹುದು ಅಂತ ಅಂದ್ಕೊಂಡಿದೀನಿ)  ಪರೀಕ್ಷೆಗೆ ಓದೋದು ಅಂದ್ರೆ ಯಾಕೋ ಬೇಜಾರು. ಅದ್ರಲ್ಲಿ ಏನೂ ಇರ್ಲಿಲ್ಲ, ಯಾವ್ದೋ ಕತೆ ಇರ್ತಿತ್ತು. ಪೂರ್ತಿ ಗಿಣಿ ಪಾಠ ಮಾಡಿ ಅದನ್ನೇ ಬರೀಬೇಕಿತ್ತು ಅಷ್ಟೇ. ಅವಾಗ್ಲಿಂದಾನೂ  ಕತೆ ಹೇಳೋದು ಅಂದ್ರೆ ಇಷ್ಟ ಇರ್ಲಿಲ್ಲ ಅನ್ಸತ್ತೆ.
ಈಗ್ಲೂ ನಂಗೆ ಚಿಕ್ ಮಕ್ಳು ಯಾರಾದ್ರೂ ಕತೆ ಹೇಳು ಅಂದ್ರೆ ಏನ್ ಹೇಳ್ಬೇಕು ಅಂತಾನೆ ಗೊತ್ತಾಗಲ್ಲ

ಅದೆಲ್ಲಿಂದ ಕಾಪಿ ಮಾಡೋ ಐಡಿಯಾ ಬಂತೋ ಗೊತ್ತಿಲ್ಲ.  ಪುಸ್ತಕಾನ ಬೆಂಚ್ ಕೆಳಗಡೆ ಇಟ್ಟು ಚಪ್ಲಿ ಆ ಕಡೆ ಒಂದ್ ಸರ್ತಿ, ಈ ಕಡೆ ಒಂದ್ ಸರ್ತಿ ಇಡೋ  ಮಾಡ್ಕೊಂಡು ಪ್ರತೀ ಸರ್ತಿನೂ ಸ್ವಲ್ಪ ಸ್ವಲ್ಪ ನೋಡ್ಕೊಂಡು ಬರ್ದೆ ಕೂಡ. ಆದ್ರೆ ಶಿಕ್ಷಕಿ ಕೈಲಿ ಸಿಕ್ಕಾಕೊಂಡಿದ್ದೆ.

ಏನೋ ಪುಣ್ಯ, ಬೇರೆ ಎಲ್ಲದ್ರಲ್ಲೂ ಚೆನ್ನಾಗಿ ಮಾರ್ಕ್ಸ್ ಬರ್ತಿತ್ತು ಅಂತ ನನ್ನ ಸುಮ್ನೆ ಬಿಟ್ಬಿಟ್ರು. ಸ್ವಲ್ಪ ಬೈದು ಪಾಸ್ ಮಾಡಿದ್ರು ಆ ಸರ್ತಿ.  ಇಲ್ಲಾ ಅಂದಿದ್ರೆ ಮುಂದಿನ ವರ್ಷ 4 ನೇ ಕ್ಲಾಸ್ ಮತ್ತೆ ಬರೀಬೇಕಿತ್ತು!!! ಇವಾಗ ನೆನೆಸ್ಕೊಂಡ್ರೂ ನಗು ಬರತ್ತೆ ಈ ಕತೆ ನಂಗೆ :-D

ಆದ್ರೂ ನೀತಿ ವಿಷಯ ಕಾಪಿ ಮಾಡೋದು ಅಂದ್ರೆ ಏನು ತಮಾಷೆನಾ, ಯಾರಾದ್ರೂ ಇದೀರಾ ನನ್ ತರದವರು?
  

Monday, March 20, 2017

ಭಯಾನಕ ರಾತ್ರಿಗಳು - 3

ನಂಗೆ ತುಂಬಾ ಚಿಕ್ಕ ವಯಸ್ಸಿಂದಾನೂ ಭಯ ಜಾಸ್ತಿ, ಜೊತೆಗೆ ಚಿಕ್ಕ ಚಿಕ್ಕ ಶಬ್ದಗಳೂ ಕೇಳೋದೂ ಜಾಸ್ತಿನೇ. ಎಷ್ಟು ಅಂದ್ರೆ, ರೂಮ್ ಅಲ್ಲಿ ಏನಾದ್ರು ಪ್ಲಾಸ್ಟಿಕ್ ಚೂರು ಗಾಳಿಗೆ ಓಡಾಡ್ತಾ ಇದ್ರೆ ಕೇಳ್ಸತ್ತೆ, ಎದುರುಗಡೆ ಮನೇಲಿ ಪಾತ್ರೆ ತೊಳಿಯೋ ಸದ್ದೂ (ಪಕ್ಕದ ಬಿಲ್ಡಿಂಗ್) ಕೇಳ್ಸತ್ತೆ ಅದೂ ನಮ್ಮನೇಲೇ ಪಾತ್ರೆ ಶಬ್ದ ಬರ್ತಿದೆಯೋ ಅನ್ನೋ ಥರ. ರಾತ್ರಿ ಹೊತ್ತಲ್ಲಿ ರಸ್ತೇಲಿ ಏನಾದ್ರೂ ನಾಯಿ ಊಳಿಡ್ತಾ ಅಥವಾ ಬೊಗಳ್ತಾ ಇದ್ರೆ ಮುಗೀತು, ಅವತ್ತು ನಿದ್ದೇನೇ ಬರಲ್ಲ.

ಹೋದ್ ವರ್ಷ ಒಂದೆರಡು ದಿನ ಇದೇ ಥರ ನಂಗೆ ಬೆಕ್ಕಿನ್ ಮರಿ ಅಳೋ ಶಬ್ದ ಕೇಳಿಸ್ತಾ ಇತ್ತು, ಬೇರೆ ಯಾರಿಗ್ ಕೇಳಿದ್ರೂ ಇಲ್ಲ ಅಂತಾ ಇದ್ರು. ಆಮೇಲೆ ರಾತ್ರಿ ಊಟ ಮಾಡ್ತಾ ಇದ್ದಾಗ ಮನೆ ಹೊರಗಡೇನೇ ಬೆಕ್ಕಿನ್ ಮರಿ ಕೂಗ್ತಾ ಇತ್ತು. ಕೆಳಗಡೆ ಮನೆಲಿ(ಅಪಾರ್ಟ್ಮೆಂಟ್) ಹೊಸದಾಗಿ ತಂದಿದ್ ಮರಿ ಅದು. ಆಮೇಲೆ ಅದು ಬಾಲ್ಕನಿಲಿ ಬಂದು ಕೂಗಕ್ಕೆ ಶುರು ಮಾಡಿದ್ರೆ ಸಾಕು, ನಾನು ನಮ್ಮನೆ ಬಾಲ್ಕನಿಗೆ ಹೋಗಿ ಮಾತಾಡಿಸ್ತಾ ಇದ್ದೆ. ಪಾಪ ಒಂದಿನ ಹೊರಗಡೆ ರಸ್ತೆಗೆ ಹೋಗಿ ಯಾವುದೊ ವಾಹನ ಕೆಳಗಡೆ ಬಿದ್ದು ಸತ್ತ್ ಹೋಯ್ತಂತೆ.  

ಮೊನ್ನೆ ಒಂದಿನ ನಾನು ಮನೇಲಿ ಒಬ್ಳೆ ಇದ್ದೆ. 11 ಕ್ಕೇ ಮನೇಲಿ ಬೇರೆ ಎಲ್ಲ ಲೈಟ್ ಆಫ್ ಮಾಡಿ ರೂಮ್ಗೆ ಬಂದೆ. ನಾನು ಒಬ್ಳೆ ಇದ್ದಾಗ RO ಕೂಡಾ ಆಫ್ ಮಾಡಿ ಮಲಕ್ಕೋತೀನಿ, ಇಲ್ಲಾ ಅಂದ್ರೆ ಅದರ ಶಬ್ದಕ್ಕೂ ಭಯ ಆಗತ್ತೆ ನಂಗೆ :-P.
ನಿದ್ದೆ ಬರ್ತಿರ್ಲಿಲ್ಲ, ಲ್ಯಾಪ್ಟಾಪ್ ಅಲ್ಲಿ ಏನೋ ನೋಡ್ತಾ ಫ್ರೆಂಡ್ಸ್ ಜೊತೆ ಚಾಟ್ ಮಾಡ್ತಾ ಇದ್ದೆ ಸ್ವಲ್ಪ ಹೊತ್ತು.  ಒಂದೆರಡ್ ದಿನದಿಂದ ಫ್ರೆಂಡ್ ಜೊತೆ ಏನೋ ಜೊತೆ ಜಗಳ ಆಗಿತ್ತು, ಹಾಗೆ ಫೋನ್ ಅಲ್ಲಿ ಸುಮಾರು ಹೊತ್ತು(almost 2 hours) ಮಾತಾಡ್ಡೆ ಅವತ್ತು. ಜಗಳ ಸರಿ ಹೋಗಕ್ಕೆ ಮುಂಚೆ ಫ್ರೆಂಡ್ ಫೋನ್ ಸ್ವಿಚ್ ಆಫ್ ಆಯ್ತು.

ಅಷ್ಟೊತ್ತು ಫೋನ್ ಅಲ್ಲಿ ಮಾತಾಡಿ ತಲೆ ಎಲ್ಲ ಕೆಟ್ಟೋಗಿತ್ತು, ಏನಾದ್ರು ಚೆನ್ನಾಗಿರೋದು ಕಾಮಿಡಿ ಸಿನಿಮಾ ನೋಡೋಣ ಅಂತ  
ಚುಪ್ಕೆ ಚುಪ್ಕೆ ನೋಡಕ್ಕೆ ಶುರು ಮಾಡ್ದೆ. ಅವಾಗ ಸುಮಾರು 2 am ಆಗಿರ್ಬಹುದು.  ಸಿನಿಮಾ ತುಂಬಾ ಸರ್ತಿ ನೋಡಿರೋ ಕಾರಣ ಜಾಸ್ತಿ ಇಷ್ಟ ಇರೋ ಸೀನ್ ಮಾತ್ರ ನೋಡ್ದೆ.  ಹೀಗೇ ರಾತ್ರಿ 3 ಗಂಟೆ ಆಯ್ತು. ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಇದ್ದಕಿದ್ದ ಹಾಗೆ ಯಾರೋ ಜೋರಾಗಿ ರೂಮ್ ಬಾಗಿಲು ತಟ್ಟಕ್ಕೆ ಶುರು ಮಾಡಿದ್ರು. ಮಲಕ್ಕೊಳಕ್ಕೆ ಮುಂಚೆ ಮೇನ್ ಬಾಗಿಲು ಹಾಕಿ ಸರಿಯಾಗಿ ಲಾಕ್ ಮಾಡಿದ್ದೆ. ಅದೂ ಸಾಲ್ದು ಅಂತ ಎಲ್ಲ ಬಾಲ್ಕನಿ ಬಾಗಿಲೂ ಹಾಕಿದ್ದೆ. ಬೇರೆ ಯಾವ್ ಬಾಗಿಲೂ ಶಬ್ದ ಆಗ್ಲಿಲ್ಲ, ಬರೀ ನಮ್ ರೂಮ್ ಬಾಗಿಲು ತಟ್ಟೋ ಶಬ್ದ.    

ನಂದು ಹೃದಯ ಜೋರಾಗಿ ಹೊಡ್ಕೊಳ್ಳಕ್ಕೆ ಶುರು ಆಯ್ತು.  ಏನಾದ್ರು ಅಷ್ಟೊತ್ತು ನಾನು ಮೂವಿ ನೋಡ್ತಾ ಎದ್ದಿಲ್ದೆ ಇದ್ದು, ಬಾಗಿಲು ಶಬ್ದಕ್ಕೆ ಎಚ್ರ ಆಗಿದ್ರೆ ಹಾರ್ಟ್ ಅಟ್ಯಾಕ್ ಆಗಿರೋದೋ ಏನೋ. ಮತ್ತೆ ಫ್ರೆಂಡ್ಗೆ ಫೋನ್ ಮಾಡ್ದೆ, ಏನೋ ಬಂದಿದೆ ಮನೆಗೆ ಅಂತ. ಆಮೇಲೆ ಸಣ್ಣದಾಗಿ ಮಿಯಾಂವ್ ಅನ್ನೋ ಶಬ್ದನೂ ಕೇಳಿಸ್ತು ನಂಗೆ, ಬೆಕ್ಕು ಅನ್ಸತ್ತೆ , ನಿಂಗೆ ಕೇಳುಸ್ತಾ ಅಂತ ಫೋನ್ ಬಾಗಿಲ್ ಹತ್ರ ಹಿಡಿದ್ರೆ ಅವನಿಗೆ ಕೇಳಿಸ್ತಾ ಇಲ್ಲ. ಕೊನೆಗೆ ಅವನೇ ಏನೂ ಆಗಲ್ಲ, ಧೈರ್ಯ ಮಾಡು, ಬಾಗಿಲು ತೆಗ್ದು ನೋಡು ಅಂತ ಹೇಳಿದ್ ಮೇಲೆ ಬಾಗಿಲು ತೆಗೆದ್ರೆ ಕೆಳಗಡೆ ಮನೆ ಬೆಕ್ಕು(ಪರ್ಷಿಯನ್ ಬೆಕ್ಕು ತೆಗೊಂಡಿದ್ರು ಅವರು 6 ತಿಂಗಳು ಮೊದ್ಲು). ಹೋದ ಜೀವ ಮತ್ತೆ ಬಂದಂಗಾಯ್ತು ನಂಗೆ.

ಹಾಲ್ ಕಿಟಕಿಲಿ ಟಿವಿ ಕೇಬಲ್ ಬಂದಿರೋ ಕಾರ್ಣ ಅದನ್ನ ಫುಲ್ ಹಾಕಕ್ಕಾಗಲ್ಲ. ಆ ಜಾಗದಲ್ಲಿ ಕೈ ಹಾಕಿ ಅದನ್ನ ಓಪನ್ ಮಾಡಿ ಒಳಗೆ ಬಂದಿತ್ತು ಅದು. ಅದನ್ನ ಎತ್ಕೊಂಡು ಹೋಗಿ ಅದ್ರ ಮನೆಗೆ ಬಿಟ್ಟ್ ಬರೋಣ ಅಂದ್ರೆ ತುಂಬಾ ಭಾರ ಅದು. ಆಮೇಲೆ ಕೆಳಗಡೆ ಮನೆಗ್ ಹೋಗಿ ಅವ್ರನ್ನ ಎಬ್ಸಿ ಕರ್ಕೊಂಡು ಬರೋ ಅಷ್ಟ್ರಲ್ಲಿ ನಂಗೆ ಸಾಕು ಸಾಕಾಗಿ ಹೋಯ್ತು. ಅವರು ಅದನ್ನ ಕರ್ಕೊಂಡು ಹೋದ್ರು.  ಗಂಟೆ  4 ಕ್ಕೆ ನಿದ್ದೆ ಮಾಡಿದ್ದು ಮಾಡೋವಷ್ಟರಲ್ಲಿ ಭಯಾನಕ ರಾತ್ರಿ ಮುಕ್ತಾಯ :-)

ಇದು ಹಳೆಯ ಕತೆಗಳು:

ಭಯಾನಕ ರಾತ್ರಿಗಳು - 2